ಕೊಪ್ಪಳ : ಕೊಪ್ಪಳ ನಗರಸಭೆ ಭ್ರಷ್ಟ ಅಧಿಕಾರಿಗಳಿಗೆ ಎಟಿಎಂ ಆಗಿದೆ. ಯಾವುದೇ ನಗರಸಭೆ ಸದಸ್ಯರ ಗಮನಕ್ಕೆ ತರದೇ ನಗರಸಭೆಯ ಕಟ್ಟಡ ನವೀಕರಣಕ್ಕೆ 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗೆ ಅಧಿಕಾರಿಗಳು ಚಾಲನೆ ಕೊಟ್ಟಿದ್ದಾರೆ. ಈ ಮೂಲಕ ನವೀಕರಣ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಗರಸಭೆಯ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಆರೋಪ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಕೊಪ್ಪಳ ನಗರಸಭೆಯಲ್ಲಿ ಬೇಕಾಬಿಟ್ಟಿ ಬಳಸಲಾಗುತ್ತಿದೆ. ಇಡೀ ಕೊಪ್ಪಳ ನಗರದಲ್ಲಿ ಯಾವುದೂ ಸರಿ ಇಲ್ಲ ಎಂದು ಅವರು ದೂರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ ಹಳ್ಳಿ, "ಮಳೆಗಾಲ ಬಂತೆಂದರೆ ರಸ್ತೆ, ಚರಂಡಿ ತುಂಬಿಕೊಂಡು ಗಬ್ಬು ನಾರುತ್ತವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಖರ್ಚು ಮಾಡಬೇಕಾದ ಅನುದಾನವನ್ನು ನಗರಸಭೆ ಕಟ್ಟಡ ನವೀಕರಣಕ್ಕೆ ಖರ್ಚು ಮಾಡುತ್ತಿದ್ದಾರೆ. ನವೀಕರಣದ ಬಗ್ಗೆ ನಗರಸಭೆಯಲ್ಲಿ ಅನುಮೋದನೆ ಕೂಡಾ ತೆಗೆದುಕೊಂಡಿಲ್ಲ. ನಗರಸಭೆ ಸದಸ್ಯರ ಗಮನಕ್ಕೆ ತರದೇ ಭ್ರಷ್ಟಚಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಕಟ್ಟಡ ನವೀಕರಣಕ್ಕೆ ಮುಂದಾಗಿದ್ದಾರೆ" ಎಂದು ಹೇಳಿದರು.
"ಅವಶ್ಯಕತೆ ಇಲ್ಲದಿದ್ದರೂ ನಗರಸಭೆಯ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವ ಬಗ್ಗೆ ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ದೂರು ಸಲ್ಲಿಸಲಾಗಿದೆ. ಕಾಮಗಾರಿ ಸ್ಥಗಿತಗೊಳಿಸಿ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ನಗರಸಭೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ದೂರಿನ ಅನ್ವಯ ನಗರಸಭೆಯ ಅಧಿಕಾರಿಗಳು ಮೂಲಭೂತ ಸೌಲಭ್ಯಕ್ಕೆ ಖರ್ಚು ಮಾಡಬೇಕಾದ ಹಣವನ್ನು ಕಟ್ಟಡ ನವೀಕರಣಕ್ಕೆ ಬಳಸುತ್ತಿರುವ ಬಗ್ಗೆ ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ನಿಯಮಾನುಸಾರವಾಗಿ ಕಾಮಗಾರಿ ನಡೆಸಬೇಕು. ನಿಯಮ ಅನುಸರಿಸದ ಅಧಿಕಾರಿಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಈ ಸೂಚನೆ ಇದ್ದರೂ ನಗರಸಭೆಯ ಕ್ಯಾರೆನ್ನದೆ ಕಾಮಗಾರಿ ಮುಂದುವರಿಸಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ತಡೆ ಹಿಡಿಯದೇ ಇದ್ದರೆ ಹೋರಾಟ ಮಾಡುತ್ತೇವೆ" ಎಂದು ಅವರು ಎಚ್ಚರಿಸಿದರು.