ಕೊಪ್ಪಳ:ನೆರೆ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ 4 ಕೋಟಿ ರೂ. ಅನುದಾನವನ್ನು ಕನಕಗಿರಿ ಕ್ಷೇತ್ರದಲ್ಲಿ ಕಾಮಗಾರಿ ಮಾಡದೇ ಬಿಲ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಜೂನ್ 4ರ ಬಳಿಕ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಪ್ರತಿಭಟನೆ ಎಚ್ಚರಿಕೆ ನೀಡಿದ ಶಿವರಾಜ ತಂಗಡಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರ ನಿವಾಸದಲ್ಲಿ ಮಾತನಾಡಿದ ಅವರು, ಕನಕಗಿರಿ ಕ್ಷೇತ್ರದಲ್ಲಿ ಕಾಮಗಾರಿ ಮಾಡದೆ ಬಿಲ್ ಎತ್ತಲಾಗಿದೆ. ಈ ಕುರಿತು ಈ ಹಿಂದೆಯೇ ಹೇಳಿದ್ದೆ. ಇದಾದ ಬಳಿಕ ಗುತ್ತಿಗೆದಾರರು ಅಲ್ಲಲ್ಲಿ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಮೊದಲೇ ಬಿಲ್ ಎತ್ತಲಾಗಿದೆ. ಇದರ ಹಿಂದೆ ಕನಕಗಿರಿ ಶಾಸಕರ ಕೈವಾಡವಿದೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ಆ ಕೆಲಸ ಮಾಡದೇ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ತನಿಖೆ ನಡೆಸುವಂತೆ ಮನವಿ ಪತ್ರ ಸಲ್ಲಿಸಿದ್ದೇನೆ. ಈವರೆಗೂ ನನಗೆ ಉತ್ತರ ಬಂದಿಲ್ಲ. ಅಕ್ರಮ ನಡೆದಿರುವುದಕ್ಕೆ ನನ್ನ ಬಳಿ ದಾಖಲೆ ಇವೆ. ಒಂದು ವೇಳೆ 4 ಕೋಟಿ ರೂ. ಅಕ್ರಮದ ಬಗ್ಗೆ ತನಿಖೆ ಆಗದಿದ್ದರೆ ಜೂನ್ 4ರ ನಂತರ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಸಿದರು.
ಕೊರೊನಾ ಆರಂಭದಲ್ಲಿ ನಿಯಂತ್ರದ ಬಗ್ಗೆ ರಾಹುಲ್ ಗಾಂಧಿ ಅವರು ಸರ್ಕಾರದ ಗಮನ ಸೆಳೆದಿದ್ದರು. ಆಗ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ಈಗ ದಿನೇ ದಿನೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೂ ನಾವು ನಿಯಂತ್ರಿಸಿದ್ದೇವೆ ಎಂದು ಬಿಜೆಪಿಯವರು ಪ್ರಧಾನಿಯನ್ನು ಹೊಗಳುತ್ತಿದ್ದಾರೆ ಎಂದು ಶಿವರಾಜ ತಂಗಡಗಿ ಟೀಕಿಸಿದರು.