ಕೊಪ್ಪಳ: ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದ್ದು, ಶೇಕಡಾ 35ರಷ್ಟಿದ್ದ ಪಾಸಿಟಿವಿಟಿ ದರ ಈಗ ಶೇಕಡಾ 20ಕ್ಕಿಂತ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ. 20ಕ್ಕಿಂತ ಕಡಿಮೆ ಇದೆ: ಜಿಲ್ಲಾಧಿಕಾರಿ ಮಾಹಿತಿ
ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ 309 ಜನರು ಮೃತಪಟ್ಟಿದ್ದಾರೆ. ಈ ಪೈಕಿ 49 ಜನರು ಜಿಲ್ಲೆಯವರಾಗಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಐವರಿಗೆ ಸೋಂಕು ತಗುಲಿರುವ ಶಂಕೆ ಇದೆ. ಪರೀಕ್ಷಾ ವರದಿ ಬರಬೇಕಿದೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಬೇಕಾದ ಇಂಜೆಕ್ಷನ್ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಡಿಸಿ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿ ಮಾಡಲಾಗಿರುವ ಲಾಕ್ಡೌನ್ ಪರಿಣಾಮಕಾರಿಯಾಗುತ್ತಿದೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಿತ್ಯವೂ 1500ರಿಂದ 1800ರವೆರೆಗ ಟೆಸ್ಟ್ ಮಾಡಲಾಗುತ್ತಿದೆ. ಲಾಕ್ಡೌನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ಸೋಂಕು ಹರಡುವಿಕೆ ಇನ್ನಷ್ಟು ನಿಯಂತ್ರಣಕ್ಕೆ ತರಬಹುದು ಎಂದರು.
ಎರಡನೇ ಡೋಸ್ ಸೇರಿದಂತೆ 2,81,120 ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಲಸಿಕೆ ಸಮಸ್ಯೆ ಇಲ್ಲ. ಎರಡನೇ ಡೋಸ್ ಪಡೆಯುವವರು ನಿಯಮಾನುಸಾರ ಪಡೆದುಕೊಳ್ಳಬೇಕು ಎಂದರು. ಕೋವಿಡ್ ಮೂರನೇ ಅಲೆಯು ಮಕ್ಕಳನ್ನು ಬಾಧಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.