ಕೊಪ್ಪಳ:ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ಡೌನ್ ಪರಿಣಾಮ ಎಲ್ಲಾ ಕ್ಷೇತ್ರಗಳನ್ನು ಹಳಿ ತಪ್ಪಿಸಿದೆ. ಮೂರನೇ ಅಲೆಯ ಭೀತಿಯಿಂದ ಇನ್ನೂ ಸರಿದಾರಿಗೆ ಬರಲು ಸಾಧ್ಯವಾಗುತ್ತಿಲ್ಲ. ಇನ್ನು ಸಾರ್ವಜನಿಕ ಬೃಹತ್ ಗಣೇಶ ಮೂರ್ತಿ ತಯಾರಿಕೆ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ.
ಬೃಹತ್ ಗಣಪತಿ ಮೂರ್ತಿ ತಯಾರಕರ ಮೇಲೆ ಕೊರೊನಾ ಕರಿಛಾಯೆ - ಕೊಪ್ಪಳ ಗಣೇಶೋತ್ಸವ
ಕೊಪ್ಪಳದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತಿದ್ದ ಬೃಹತ್ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ವಸ್ತ್ರದ ಕುಟುಂಬ ಕೊರೊನಾದಿಂದಾಗಿ ಸಂಕಷ್ಟದಲ್ಲಿದ್ದು, ಮೂರ್ತಿ ತಯಾರಿ ಕೆಲಸ ಸ್ಥಗಿತಗೊಳಿಸಿದ್ದಾರೆ.
ಗಣೇಶೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ದೊಡ್ಡ ದೊಡ್ಡ ಗಣೇಶಮೂರ್ತಿಗಳನ್ನು ತಯಾರಿಸುತ್ತಿದ್ದವರು ಈಗ ಕೇವಲ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಕೊಪ್ಪಳದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತಿದ್ದ ಬೃಹತ್ ಗಣೇಶ ಮೂರ್ತಿಗಳನ್ನು ಇಲ್ಲಿ ವಸ್ತ್ರದ ಕುಟುಂಬ ಕಳೆದ 30 ವರ್ಷಗಳಿಂದ ತಯಾರಿಸುತ್ತಿತ್ತು. ಪ್ರತಿ ವರ್ಷವೂ ಸುಮಾರು 100 ಕ್ಕೂ ಹೆಚ್ಚು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿತ್ತು. ಆದರೆ ಕೊರೊನಾದಿಂದಾಗಿ ಅಂತಹ ಮೂರ್ತಿಗಳನ್ನು ತಯಾರಿ ಮಾಡೋದನ್ನು ಸ್ಥಗಿತಗೊಳಿಸಿದ್ದಾರೆ.
ಈಗ ಕೇವಲ ಮನೆಯಲ್ಲಿ ಪ್ರತಿಷ್ಠಾಪಿಸುವ ಸಣ್ಣ ಗಣೇಶ ಮೂರ್ತಿಗಳನ್ನು ಮಾತ್ರ ಒಂದಿಷ್ಟು ತಯಾರಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಈ ವೃತ್ತಿ ಹಾಗೂ ಕಲೆಯನ್ನು ಕೈಬಿಡಬಾರದು ಎಂದುಕೊಂಡು ಸಣ್ಣ ಗಣೇಶಮೂರ್ತಿಗಳನ್ನು ಮಾತ್ರ ತಯಾರಿಸಿದ್ದೇವೆ ಎನ್ನುತ್ತಾರೆ ಕಲಾವಿದ ವಿಜಯಕುಮಾರ್ ವಸ್ತ್ರದ.