ಕೊಪ್ಪಳ:ಕೊರೊನಾ ಭೀತಿ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಕಷ್ಟದಲ್ಲಿರುವ ಸಾಮಾನ್ಯ ಜನರ ಬದುಕು ಮತ್ತಷ್ಟು ಕಷ್ಟದತ್ತ ವಾಲುತ್ತಿದೆ. ಇದಕ್ಕೆ ಕಲೆಯನ್ನು ನಂಬಿಕೊಂಡ ಬದುಕು ಸಾಗಿಸುವ ಗ್ರಾಮೀಣ ಭಾಗದ ಸಾವಿರಾರು ಕಲಾವಿದರ ಬದುಕು ಸಹ ಹೊರತಾಗಿಲ್ಲ. ಅವರ ಬದುಕು ಈಗ ಸಂಕಷ್ಟದಲ್ಲಿ ಸಿಲುಕಿದ್ದು, ಮುಂದಿನ ಜೀವನ ಹೇಗೆ ನಡೆಸೋದು ಎಂಬ ಚಿಂತೆಯಲ್ಲಿ ಕಲಾವಿದರಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸಲು, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಜನರಿಗೆ ತಲುಪಿಸಲು ಬೀದಿ ನಾಟಕ ತಂಡಗಳು, ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ವಿವಿಧ ಕಲಾವಿದರ ಬದುಕು ಈಗ ಬೀದಿಗೆ ಬಿದ್ದಿದೆ. ಕೊರೊನಾ ಭೀತಿಯಿಂದ ಈ ಹಿಂದೆ ಆಗಿದ್ದ ಲಾಕ್ಡೌನ್ ಹಾಗೂ ಪ್ರಸ್ತುತ ಹೆಚ್ಚುತ್ತಿರುವ ಕೊರೊನಾ ಭೀತಿ ಈ ಕಲಾವಿದರನ್ನು ಚಿಂತೆಗೀಡು ಮಾಡಿದೆ.
ಕಲಾವಿದರ ಜೀವನದ ಮೇಲೆ ಕೊರೊನಾ ಕರಿ ನೆರಳು ಜಿಲ್ಲೆಯಲ್ಲಿರುವ ಬೀದಿ ನಾಟಕ, ಮಹಿಳಾ ಮತ್ತು ಪುರುಷರ ಡೊಳ್ಳುಕುಣಿತ ತಂಡ, ವೀರಗಾಸೆ, ಹಗಲುವೇಷ, ಮೋಜಿನಗೊಂಬೆ, ಸಮ್ಮಾಳ ವಾದನ, ಕೋಲಾಟ, ಹಲಗೆ ಮೇಳ, ಕರಡಿ ಮಜಲು, ಜಾಂಜ್ ಮೇಳ ಸೇರಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಕಲಾವಿದರು ಹಾಗೂ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ, ಕಥಾ ಕೀರ್ತನ, ಬಯಲಾಟ, ದೊಡ್ಡಾಟ, ರಂಗಭೂಮಿ ಕಲಾವಿದರು, ಹಾಸ್ಯ ಕಾರ್ಯಕ್ರಮಗಳ ಕಲಾವಿದರು, ಪುರಾಣ ಪ್ರವಚನಕಾರರು ಸೇರಿದಂತೆ ಅನೇಕ ಪ್ರಕಾರದ ಕಲಾವಿದರ ಬದುಕು ಈಗ ಸಂಕಷ್ಟದ ಸುಳಿಗೆ ಸಿಲುಕಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಮತ್ತು ಕೊರೊನಾ ಭೀತಿ ಶುರುವಾದಾಗಿನಿಂದಲೂ ಈ ಕಲಾವಿದರ ಕೈಗೆ ಕೆಲಸವಿಲ್ಲ. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ವಿವಿಧ ಕಲಾ ಪ್ರಕಾರಗಳ 50 ಕಲಾ ತಂಡಗಳು ಹಾಗೂ ಸುಮಾರು 650 ಕಲಾವಿದರು ಇದ್ದಾರೆ. ಕಲಾ ಸಂಘಗಳಿಗೆ ಇಲಾಖೆಯ ಮೂಲಕ ವಿವಿಧ ಕಾರ್ಯಕ್ರಮ ನೀಡಲಾಗುತ್ತಿತ್ತು. ಕೊರೊನಾದಿಂದಾಗಿ ಇಲಾಖೆಯಿಂದ ಯಾವುದೇ ಕಾರ್ಯಕ್ರಮಗಳು ಕಲಾವಿದರಿಗೆ ನೀಡಿಲ್ಲ. ಖಾಸಗಿ ಕಾರ್ಯಕ್ರಮಗಳಿಗೂ ಈಗ ಕೆಲ ನಿಬಂಧನೆಗಳು ಇರುವುದರಿಂದ ಕಲಾವಿದರಿಗೆ ಕೆಲಸವಿಲ್ಲದಂತಾಗಿ ಬದುಕು ದುಸ್ಥಿತಿಗೆ ತಲುಪುತ್ತಿದೆ ಎಂದು ಕಲಾವಿದರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ವರ್ಷದ ಆರಂಭದಿಂದಲೇ ಕಲಾವಿದರಿಗೆ ಕೆಲಸವಿಲ್ಲದಂತಾಗಿದೆ. ಎಲ್ಲಾ ಪ್ರಕಾರದ ಕಲಾವಿದರ ಬದುಕು ಈಗ ಕಷ್ಟದಲ್ಲಿದೆ. ಜಾತ್ರೆ, ಹಬ್ಬ ಹರಿದಿನಗಳು ಇರುವಾಗ ಕಲಾವಿದರಿಗೆ ಒಂದಿಷ್ಟು ಕೆಲಸ ಸಿಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಅವೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಈಗ ಶ್ರಾವಣ ಮಾಸ ಪ್ರಾರಂಭವಾಗುತ್ತಿದೆ. ಸಹಜವಾಗಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳು ಇರುತ್ತಿದ್ದವು. ಕೊರೊನಾ ಇರುವುದರಿಂದ ಅವುಗಳು ಇಲ್ಲ. ಹೀಗಾಗಿ ಎಲ್ಲಾ ಕಲಾವಿದರ ಬದುಕು ಕಷ್ಟದಲ್ಲಿದೆ. ಸರ್ಕಾರ ಕಲಾವಿದರ ನೆರವಿಗೆ ಬರಬೇಕು ಎಂದು ಮನವಿ ಮಾಡ್ತಾರೆ ಕಲಾವಿದರು.