ಕೊಪ್ಪಳ: ಕೊರೊನಾ ಸೋಂಕಿತರು ತಡವಾಗಿ ಆಸ್ಪತ್ರೆಗೆ ಬರುತ್ತಿರುವುದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಭಾಗ್ಯನಗರದಲ್ಲಿ ನಡೆದ ಕೊರೊನಾ ಮುಕ್ತ ಕೊಪ್ಪಳ ಜಿಲ್ಲೆ ಅಭಿಯಾನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ, ಸಾವಿನ ಸಂಖ್ಯೆ ಏರುತ್ತಿರುವ ಕುರಿತು ಅವಲೋಕಿಸಿದಾದ ಜಿಲ್ಲೆಯ ಸುಮಾರು 25 ಸ್ಥಳಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರೋದು ಕಂಡು ಬಂದಿದೆ.
ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೋಂಕಿತರು ಕಾಯಿಲೆ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರುತ್ತಿರೋದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಜಿಲ್ಲೆಯ ಜನರು ಕೊರೊನಾ ಸೋಂಕಿನ ಸಣ್ಣ ಲಕ್ಷಣಗಳು ಕಂಡು ಬಂದರೂ ಸಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭದಲ್ಲಿಯೇ ಸೋಂಕಿತರು ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದರು.
ಸೋಂಕಿತರ ಸ್ಥಿತಿಗೆ ಅನುಗುಣವಾಗಿ ಈಗ ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಜನರು ಆರೋಗ್ಯ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ ನಿಜವಾದ ಮಾಹಿತಿ ನೀಡಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಬೇರೆ ಬೇರೆ ಕಾಯಿಲೆಗಳನ್ನು ಹೊಂದಿರುವವವರು ಆದಷ್ಟು ಕಾಳಜಿ ವಹಿಸಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇನ್ನಿತರೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು. ಜನರ ಸಹಕಾರವಿದ್ದರೆ ಮಾತ್ರ ನಾವು ಕೊರೊನಾ ಸೋಂಕನ್ನು ಹೋಗಲಾಡಿಸಿ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬಹುದು ಎಂದರು.