ಕೊಪ್ಪಳ: ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ಡೌನ್ನಿಂದ ಸಾಮಾನ್ಯ ಜನರು ಬದುಕು ಹಳಿ ತಪ್ಪಿದೆ. ಹಾಗಾಗಿ ಕಾರ್ಮಿಕರು ಹಾಗೂ ಕೆಲ ವರ್ಗದ ಜನರಿಗೆ ಸರ್ಕಾರ ಈ ಬಾರಿಯೂ ಪರಿಹಾರ ಘೋಷಿಸಿದೆ.
ಈ ಪೈಕಿ ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಕಳೆದ ವರ್ಷಕ್ಕಿಂತಲೂ ಎರಡು ಪಟ್ಟು ಹೆಚ್ಚು ನೋಂದಣಿಯಾಗಿದ್ದಾರೆ. ಆದರೆ ಬಹುತೇಕರಿಗೆ ಇನ್ನೂ ಪರಿಹಾರದ ಹಣ ಮಾತ್ರ ಸಿಕ್ಕಿಲ್ಲ.
ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಹಾಗೂ ಕೊರೊನಾ ಸೋಂಕಿನಿಂದಾದ ಲಾಕ್ಡೌನ್ ಪರಿಹಾರ ಸಿಗಲಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಕಳೆದ ವರ್ಷ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಸಂಖ್ಯೆಯು ಒಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ.
ಕಟ್ಟಡ ಕಾರ್ಮಿಕರಿಗೆ ಇನ್ನೂ ಸಿಗದ ಕೊರೊನಾ ಪರಿಹಾರ ಪ್ಯಾಕೇಜ್ ಕಾರ್ಮಿಕ ಇಲಾಖೆಯಲ್ಲಿ ಕಳೆದ ವರ್ಷ ಕೊಪ್ಪಳ ಜಿಲ್ಲೆಯಲ್ಲಿ 28,454 ಜನ ಕಟ್ಟಡ ಕಾರ್ಮಿಕರು ನೋಂದಾಯಿಸಿಕೊಂಡಿದ್ದರು. ಒಂದು ವರ್ಷದಲ್ಲಿ ಈ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಅಂದರೆ ಬರೋಬ್ಬರಿ 64,184 ಜನರು ಕಟ್ಟಡ ಕಾರ್ಮಿಕರು ಎಂದು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ ಸರ್ಕಾರ ಕೊರೊನಾ ಪರಿಹಾರ ಪ್ಯಾಕೇಜ್ನಲ್ಲಿ ಕಾರ್ಮಿಕರಿಗೆ 5 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಅದರಂತೆ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 28,454 ಕಟ್ಟಡ ಕಾರ್ಮಿಕರ ಪೈಕಿ 10,400 ಜನ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ಇನ್ನುಳಿದ ಕಾರ್ಮಿಕರ ಖಾತೆಗೆ ಪರಿಹಾರ ಹಣ ಜಮೆಯಾಗಿಲ್ಲ.
ಈ ವರ್ಷ ಸರ್ಕಾರ ಮೂರು ಸಾವಿರ ರೂಪಾಯಿ ಘೋಷಣೆ ಮಾಡಿದೆ. ಈಗಾಗಲೇ ಕಾರ್ಮಿಕರ ಹೆಸರು ನೋಂದಾಯಿಸಿಕೊಂಡಿರುವುದರಿಂದ ಆನ್ಲೈನ್ನಲ್ಲಿ ಅದನ್ನೇ ಆಧರಿಸಿ ಕಾರ್ಮಿಕರ ಖಾತೆಗೆ ಪರಿಹಾರದ ಹಣ ಜಮೆಯಾಗಲಿದೆ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ವೀಣಾ ಮಾಸ್ತಿ.
ಇನ್ನೂ ಬರೋಬ್ಬರಿ 18 ಸಾವಿರ ಕಾರ್ಮಿಕರಿಗೆ ಪರಿಹಾರದ ಹಣ ಬಂದಿಲ್ಲ. ಕಳೆದ ವರ್ಷದ ಪರಿಹಾರದ ಹಣವೇ ಇನ್ನೂ ಸಾವಿರಾರು ಕಾರ್ಮಿಕರಿಗೆ ಮುಟ್ಟಿಲ್ಲ. ಈ ವರ್ಷ ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್ನ ಪರಿಹಾರದ ಹಣ ಯಾವಾಗ ಬರುತ್ತದೆ ಎಂದು ಕಟ್ಟಡ ಕಾರ್ಮಿಕರು ಪ್ರಶ್ನಿಸುವಂತಾಗಿದೆ. ಅಲ್ಲದೆ ಕಾರ್ಮಿಕ ಇಲಾಖೆಯಲ್ಲಿ ಈಗ ನೊಂದಣಿಯಾಗಿರುವ ಕಟ್ಟಡ ಕಾರ್ಮಿಕರ ಸಂಖ್ಯೆಯನ್ನು ನೋಡಿದರೆ ಒಂದಿಷ್ಟು ನಕಲಿ ಕಟ್ಟಡ ಕಾರ್ಮಿಕರು ಇದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪರಿಹಾರ ತಲುಪದಂತಾಗುತ್ತಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಬೇರೆ ಬೇರೆ ಕೆಲಸ ಮಾಡುತ್ತಿರುವವರು ಸಹ ತಾವು ಕಟ್ಟಡ ಕಾರ್ಮಿಕರೆಂದು ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಕಾರ್ಮಿಕ ಇಲಾಖೆಯು ಸರಿಯಾಗಿ ತಪಾಸಣೆ ಮಾಡಬೇಕು ಎಂದು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ರಮೇಶ ಆಗ್ರಹಿಸಿದ್ದಾರೆ.