ಗಂಗಾವತಿ (ಕೊಪ್ಪಳ):ಯತಿವರೇಣ್ಯ ಜಯತೀರ್ಥರ ಮೂಲ ವೃಂದಾವನದ ಬಗ್ಗೆ ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ನವವೃಂದಾವನ ಸೇವಾ ಸಮಿತಿ ಆಶ್ರಯದಲ್ಲಿ ಬ್ರಾಹ್ಮಣ ಸಮಾಜ ಮಂಗಳವಾರ ಪ್ರತಿಭಟನೆ ನಡೆಯಿತು.
ಗಂಗಾವತಿಯ 17ನೇ ವಾರ್ಡ್ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಆರಂಭವಾದ ಮೌನ ಪ್ರತಿಭಟನೆ, ವಾಸವಿ, ಪಂಪಾನಗರ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ವೃತ್ತದ ಮೂಲಕ ಹಾದು ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತಲುಪಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಾತನಾಡಿ, ಜಯತೀರ್ಥರ ಮೂಲ ವೃಂದಾವನ ಇರುವುದು ಆನೆಗೊಂದಿ ಸಮೀಪದ ನವ ವೃಂದಾವನ ಗಡ್ಡೆಯಲ್ಲಿ. ಆದರೆ ಕೆಲವರು ಯತಿವರೇಣ್ಯರಿಗೆ ಅಪಮಾನ ಮಾಡುವ ರೀತಿಯಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿದೆ ಎಂದು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆನೆಗೊಂದಿಯ ನವವೃಂದಾವನದಲ್ಲಿನ ಸ್ಥಳವೇ ಜಯತೀರ್ಥರ ಮೂಲ ವೃಂದಾವನ ಎಂದು ಸ್ಪಷ್ಟಪಡಿಸಿದರು.
ನವವೃಂದಾವನದಲ್ಲಿ ಜುಲೈ 6ರಿಂದ ಮೂರು ದಿನಗಳ ಕಾಲ ಜಯತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಂಡಿದ್ದು, ಈ ಹಿನ್ನೆಲೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ರಾಯರ ಮಠದ ಭಕ್ತರಿಗೆ ಸೂಕ್ತ ರಕ್ಷಣೆ ನೀಡಿ ಧಾರ್ಮಿಕ ಕಾರ್ಯಕ್ರಮ ಆಚರಣೆಗೆ ಅವಕಾಶ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ನಂತರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ನವವೃಂದಾವನ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.