ಕರ್ನಾಟಕ

karnataka

ETV Bharat / state

2ನೇ ದಿನವೂ ಮುಂದುವರಿದ ತೆರವು ಕಾರ್ಯ: ಆನೆಗೊಂದಿ ಹೋಬಳಿ ಗ್ರಾಮಗಳಲ್ಲಿ 24 ಅನಧಿಕೃತ ರೆಸಾರ್ಟ್​ ನೆಲಸಮ - ವಿಶ್ವ ವಿಖ್ಯಾತ ಅಂಜನಾದ್ರಿ

ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಆನೆಗೊಂದಿ ಹಾಗೂ 11 ಗ್ರಾಮಗಳಲ್ಲಿ ಸದ್ಯ ಅನಧಿಕೃತ 57 ವಾಣಿಜ್ಯ ಘಟಕಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ಮಂಗಳವಾರ 24 ಘಟಕಗಳನ್ನು ಪೂರ್ಣ ಪ್ರಮಾಣದಲ್ಲಿ ನೆಲಸಮಗೊಳಿಸಲಾಗಿದೆ.

24 unauthorized resorts
ಆನೆಗೊಂದಿ ಹೋಬಳಿ ಗ್ರಾಮಗಳಲ್ಲಿ 24 ಅನಧಿಕೃತ ರೆಸಾರ್ಟ್​ ನೆಲಸಮ

By

Published : Jun 20, 2023, 10:53 PM IST

ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಹೋಬಳಿ ನಾನಾ ಗ್ರಾಮಗಳಲ್ಲಿರುವ ಅನಧಿಕೃತ ವಾಣಿಜ್ಯ ಚಟುವಟಿಕೆಗಳಾದ ಹೋಂ ಸ್ಟೇ, ರೆಸಾರ್ಟ್​ ತೆರವು ಕಾರ್ಯಾಚರಣೆ ಎರಡನೇ ದಿನ ಮಂಗಳವಾರವೂ ಮುಂದುವರೆಯಿತು. ತಹಸೀಲ್ದಾರ್ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿತ್ತು. ಮೊದಲ ದಿನ ಕೆಲವು ರೆಸಾರ್ಟ್​ ಮಾಲೀಕರು ಸ್ವಯಂ ಪ್ರೇರಣೆಯಿಂದ ತಾವೇ ತಮ್ಮ ವಾಣಿಜ್ಯ ಘಟಕಗಳನ್ನು ತೆರವು ಮಾಡಿಕೊಂಡಿದ್ದರು.
ಆದರೆ ಬಾಕಿ ಉಳಿದ ವಾಣಿಜ್ಯ ಘಟಕಗಳ ತೆರವು ಕಾರ್ಯಾಚರಣೆ ಮಂಗಳವಾರ ಮುಂದುವರೆಯಿತು. ನಾನಾ ಇಲಾಖೆಯ ಸಿಬ್ಬಂದಿ ಒಳಗೊಂಡಂತೆ ಬೆಳಗ್ಗೆ 9ಕ್ಕೆ ಆರಂಭವಾದ ಕಾರ್ಯಾಚರಣೆ ಸಂಜೆವರೆಗೂ ಮುಂದುವರೆದಿತ್ತು.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಆನೆಗೊಂದಿ ಹಾಗೂ ಇತರೇ 11 ಗ್ರಾಮಗಳಲ್ಲಿ ಸದ್ಯ 57 ವಾಣಿಜ್ಯ ಘಟಕಗಳನ್ನು ಗುರುತಿಸಲಾಗಿದೆ. ಈ ಪೈಕಿ ಈಗಾಗಲೇ 24 ಘಟಕಗಳನ್ನು ಪೂರ್ಣ ಪ್ರಮಾಣದಲ್ಲಿ ನೆಲಸಮ ಮಾಡಲಾಗಿದೆ. ನ್ಯಾಯಾಲಯದ ವಿಚಾರಣೆ ಬಾಕಿ ಇರುವ ಮತ್ತು ತೆರವಿಗೆ ತಡೆ ತಂದಿರುವ 28 ವಾಣಿಜ್ಯ ಘಟಕಗಳಿಗೆ ತಾತ್ಕಾಲಿಕ ವಿನಾಯ್ತಿ ನೀಡಲಾಗಿದೆ.

ನ್ಯಾಯಾಲಯದ ಆದೇಶ ಗಮನಿಸಿ ಬಾಕಿ ಇರುವ 28 ಘಟಕಗಳನ್ನು ತೆರವು ಮಾಡಲಾಗುವುದು.ನಾಲ್ಕು ರೆಸಾರ್ಟ್​ಗಳನ್ನು ಸೀಜ್ ಮಾಡಿ ಯಾವುದೇ ವಹಿವಾಟು ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಒಂದು ವಾಣಿಜ್ಯ ಘಟಕವಿದ್ದು ಬುಧವಾರ ತೆರವು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ತೆರವು ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಉಪತಹಸೀಲ್ದಾರ್ ಮಹೆಬೂಬ ಅಲಿ, ರವಿ ನಾಯಕವಾಡಿ, ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ, ಆನೆಗೊಂದಿ ಪಿಡಿಒ ಕೃಷ್ಣಪ್ಪ ಸೇರಿದಂತೆ ಪಿಎಸ್ಐ ಪುಂಡಪ್ಪ ಜಾಧವ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.

ವಿಶ್ವ ವಿಖ್ಯಾತ ಅಂಜನಾದ್ರಿ ಸುತ್ತಲೂ ತಲೆಎತ್ತಿದ್ದ ಅನಧಿಕೃತ ಬಹುತೇಕ ರೆಸಾರ್ಟ್​ಗಳಲ್ಲಿ ಮದ್ಯ, ನಿಷೇಧಿತ ಪದಾರ್ಥಗಳ ಬಳಕೆ ಸೇರಿದಂತೆ ಅನೈತಿಕ ಚಟುವಟಿಕೆ ನಡೆಯುತ್ತಿತ್ತು. ಇದೀಗ ತೆರವು ಕಾರ್ಯಚರಣೆಯಿಂದ ಅಕ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ ಎಂದು ಆನೆಗೊಂದಿಯ ಮಂಜುನಾಥ ಸಂತಸ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗ ನಿಂದನೆ: ತುಂಗಭದ್ರಾ ನದಿಯ ಎರಡು ಭಾಗದಲ್ಲಿ ನ್ಯಾಯಾಲಯದ ಆದೇಶ ಮೀರಿ ಇಲ್ಲಿ ರೆಸಾರ್ಟ್, ಹೋಂ ಸ್ಟೇ, ವಾಣಿಜ್ಯ ಚಟುವಟಿಕೆ ನಡೆಯಲು ಅವಕಾಶ ನೀಡುವ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಹೊಸಪೇಟೆಯ ಕಲ್ಯಾಣ ಕೇಂದ್ರದ ಕೊಟ್ಟೂರು ಸ್ವಾಮಿ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ಆದೇಶ ಜಾರಿಯಾಗುತ್ತಲೆ ಎಚ್ಚೆತ್ತ ಹವಾಮಾ ಅಧಿಕಾರಿಗಳು ಜೂ.12ರಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಲು ಸೂಚಿಸಿದ್ದರು.

ಆನೆಗೊಂದಿ ಭಾಗದಲ್ಲಿ ಅನಧಿಕೃತ ನಿರ್ಮಾಣವಾಗಿರುವ ವಾಣಿಜ್ಯ ಕಟ್ಟಡಗಳಿಗೆ ಯಾವುದಾದರೂ ಇಲಾಖೆ ಅನುಮತಿ, ಪರವಾನಿಗೆ ನೀರು, ವಿದ್ಯುತ್ ಸೇರಿದಂತೆ ಸೌಲಭ್ಯ ಕಲ್ಪಿಸಿದ್ದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಬೇಕು ಎಂದು ಪ್ರಾಧಿಕಾರ ಸೂಚನೆ ನೀಡಿತ್ತು. ವಿಶ್ವ ಪರಂಪರೆಯ ಪಟ್ಟಿಯಲ್ಲಿ ಬರುವ ಸ್ಥಳದ ಸಂರಕ್ಷಣೆಗಾಗಿ ಮತ್ತು ಈ ಭಾಗದಲ್ಲಿ ನಡೆಯುವ ಅನಧಿಕೃತ ಚಟುವಟಿಕೆ, ವಾಣಿಜ್ಯ ವ್ಯವಹಾರ ಸಂಪೂರ್ಣ ತಡೆಗಟ್ಟಲು ಪ್ರತ್ಯೇಕ ಭದ್ರತಾ ದಳದ ರಚನೆಯಾಗುವವರೆಗೂ ಹಾಲಿ ಸಮಿತಿ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾಡಳಿತವೂ ಕಾರ್ಯಾಚರಣೆಗೆ ಇಳಿದಿತ್ತು.

ಇದನ್ನೂಓದಿ:ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷ, ಸದಸ್ಯರ ನೇಮಕ ಕೋರಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ABOUT THE AUTHOR

...view details