ಕರ್ನಾಟಕ

karnataka

ETV Bharat / state

ರಾತ್ರಿ ಎಂಟಾದರೆ ಸಾಕು ಮನೆಗೆ ಕಲ್ಲು! ಗಂಗಾವತಿಯಲ್ಲಿ ಏನಿದು ಅಚ್ಚರಿ? - Stone attack on house

ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ವಿಸ್ಮಯ ಎಂಬಂತೆ ಮನೆಯ ಮೇಲೆ ಕಲ್ಲು ಬೀಳುತ್ತಿವೆ.

Stone attack on house
ಮನೆ ಮೇಲೆ ಕಲ್ಲಿನ ದಾಳಿ

By

Published : Apr 4, 2023, 10:37 PM IST

ಗಂಗಾವತಿ (ಕೊಪ್ಪಳ) : ರಾತ್ರಿ ಎಂಟು ಗಂಟೆಯಾದರೆ ಸಾಕು ಮನೆಯ ಮೇಲೆ ಇದ್ದಕ್ಕಿದ್ದಂತೆ ಕಲ್ಲುಗಳು ಬೀಳುವ ವಿಸ್ಮಯಕಾರಿ ಘಟನೆ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ. ರಾತ್ರಿ ಹನ್ನೊಂದು ಗಂಟೆವರೆಗೂ ಆಗಾಗ್ಗೆ ಕಲ್ಲುಗಳು ಬೀಳುವ ಸದ್ದು ಕೇಳಿಸುತ್ತದೆ. ಈ ಕಲ್ಲುಗಳು ಬೀಳುವುದೆಲ್ಲಿಂದ? ಭಾನಾಮತಿ ಪ್ರಕರಣವೋ? ಅಥವಾ ಕಿಡಿಗೇಡಿಗಳ ಕೃತ್ಯವೋ? ಎಂದರಿಯದ ಬಡ ಕುಟುಂಬ ತತ್ತರಿಸಿದೆ.

ಶ್ರೀರಾಮನಗರ ಗ್ರಾಮದ 6ನೇ ವಾರ್ಡ್​ನ ಸಂತೋಷಿ ಮಾತಾ ದೇವಸ್ಥಾನದ ಸಮೀಪ ಇರುವ ಖಾಜಾಪಾಷಾ ಎಂಬ ಬಡ ಕೂಲಿಕಾರ್ಮಿಕನಿಗೆ ಸೇರಿದ ಮನೆಯ ಮೇಲೆ ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲುಗಳು ಬೀಳುತ್ತಿವೆ. ಈ ಕಲ್ಲುಗಳು ಎಲ್ಲಿಂದ ಬರುತ್ತಿವೆ ಎಂದು ಪತ್ತೆ ಹಚ್ಚಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಗ್ಯಾಂಗ್ಮನ್ ಆಗಿ ಕೆಲಸ ಮಾಡುತ್ತಿರುವ ಖಾಜಾಪಾಷಾ ಮತ್ತು 80 ವರ್ಷ ವಯೋಮಾನದ ತಾಯಿ ಹೊನ್ನೂರಬಿ ಅವರೊಂದಿಗೆ ವಾಸವಾಗಿದ್ದಾರೆ. ಮನೆಯಲ್ಲಿ ಈ ಇಬ್ಬರೇ ಇದ್ದು ಮನೆಯ ಮೇಲೆ ಬೀಳುತ್ತಿರುವ ಕಲ್ಲಿನಿಂದಾಗಿ ಹೈರಾಣಾಗಿ ಹೋಗಿದ್ದಾರೆ.

ಇದನ್ನೂ ಓದಿ :ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮನಸೋತ ಯುವಕ.. ಚಿತ್ರಗಳ ಮೂಲಕ ಗೋಡೆಗಳಿಗೆ ಜೀವ ತುಂಬುತ್ತಿರುವ ರಷ್ಯಾ ಕಲಾವಿದ

ಘಟನೆ ಬಗ್ಗೆ ಮಾತನಾಡಿರುವ ಮನೆ ಮಾಲೀಕ ಖಾಜಾಪಾಷಾ, ಸಂಜೆ ಏಳೆಂಟು ಗಂಟೆಯಿಂದ ಆರಂಭವಾಗುವ ಕಲ್ಲು ಬೀಳುವ ಪ್ರಕ್ರಿಯೆ ಒಮ್ಮೊಮ್ಮೆ ಹತ್ತು ಗಂಟೆವರೆಗೂ ನಡೆಯುತ್ತದೆ. ನೆರೆ ಹೊರೆಯ ಮನೆಯವರು ಸ್ಥಳಕ್ಕೆ ಬಂದು ಪರಿಶೀಲಿಸುವ ಸಂದರ್ಭದಲ್ಲಿಯೂ ಕೆಲವು ಬಾರಿ ಕಲ್ಲು ಬಿದ್ದಿವೆ ಎಂದು ಹೇಳಿದರು. 10 ರಿಂದ 20 ಎಂಎಂ ಗಾತ್ರದ ಕಲ್ಲುಗಳು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲೆ ಹೊದಿಸಲಾಗಿರುವ ಸಿಮೆಂಟ್ ಶೀಟ್ ಒಡೆದಿದೆ. ಯಾರಾದರೂ ಮಾಟ ಮಂತ್ರ ಮಾಡಿಸಿದ್ದಾರೋ? ಅಥವಾ ಕಿಗೇಡಿಗಳ ಕೃತ್ಯವೋ? ಗೊತ್ತಾಗುತ್ತಿಲ್ಲ ಎಂದರು.

ಕಳೆದ ಒಂದು ವಾರದಿಂದ ಈ ಕೃತ್ಯ ನಡೆಯುತ್ತಿದ್ದು ಸರಿಯಾಗಿ ಮನೆಯಲ್ಲಿ ಇರಲು ಆಗದೆ, ನಿದ್ರೆ ಮಾಡಲಾಗದಂತ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಒಮ್ಮೆ 112 ಪೊಲೀಸರ ಸಹಾಯವಾಣಿಗೆ ಕರೆ ಮಾಡಿದ್ದು, ಪೊಲೀಸರು ಬಂದು ಪರಿಶೀಲಿಸಿ ಹೋಗಿದ್ದಾರೆ. ಮತ್ತೆ ಬೆಳಗ್ಗೆ ಬರುವುದಾಗಿ ಹೇಳಿ ಹೋಗಿರುವವರು ಮೂರು ದಿನ ಕಳೆದರೂ ಇದುವರೆಗೂ ಬಂದಿಲ್ಲ. ಮನೆಯಲ್ಲಿ ವಾಸ ಮಾಡಲು ಭಯ ಉಂಟಾಗಿದ್ದು, ಈ ಬಗ್ಗೆ ಸಂಬಂಧಿತರು ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ಖಾಜಾಪಾಷಾ ಮನವಿ ಮಾಡಿದರು.

ಇದನ್ನೂ ಓದಿ :ಚರಂಡಿ ನೀರು ಹರಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಗಾಯಾಳುಗಳು ಆಸ್ಪತ್ರೆಗೆ ದಾಖಲು

ABOUT THE AUTHOR

...view details