ಕೊಪ್ಪಳ :ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಮುನಿರಾಬಾದ್‌ನ ಪಂಪಾವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.
ಸಿಂಧನೂರು ಕ್ಷೇತ್ರದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ತಾಲೂಕಿನ ಮುನಿರಾಬಾದ್‌ನ ಪಂಪಾವನದ ಬಳಿ ಕೈಗೆ ಕಪ್ಪುಪಟ್ಟಿ ಕಟ್ಟಿ ಪ್ರತಿಭಟನೆ ನಡೆಸಿದರು. ತುಂಗಭದ್ರಾ ಜಲಾಶಯದಲ್ಲಿ ಸುಮಾರು 33 ಟಿಎಂಸಿಯಷ್ಟು ಹೂಳು ತುಂಬಿದ್ದು ನೀರು ವ್ಯರ್ಥವಾಗುತ್ತಿದೆ. ಅದಕ್ಕಾಗಿ ಕೆಐಎಡಿಬಿ ಮೂಲಕ ಭೂಸ್ವಾಧೀನಪಡಿಸಿಕೊಂಡು ನವಲಿ ಬಳಿ ಸಮಾನಾಂತರ ಜಲಾಶಯ ಯೋಜನೆ ಆರಂಭಿಸಬೇಕು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈ ಕಾರ್ಯಕರ್ತರ ಪ್ರತಿಭಟನೆ.. ಇನ್ನು, ಎಡದಂಡೆ ಮುಖ್ಯನಾಲೆಯ ಶಾಶ್ವತ ದುರಸ್ಥಿ ಮಾಡಬೇಕು. ತುಂಗಭದ್ರಾ ಮಂಡಳಿಯಲ್ಲಿ ಹಾಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯನ್ನು ಬದಲಾಯಿಸಬೇಕು. ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣಾ ಹಾಗೂ ಕರ್ನಾಟಕದವರನ್ನು ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಬೇಕು. ಮುನಿರಾಬಾದ್ ನೀರಾವರಿ ಯೋಜನಾ ವೃತ್ತದ ಐದು ವಿಭಾಗಗಳಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಂಧನೂರಿನಲ್ಲಿಯೂ ಕೂಡ ತುಂಗಭದ್ರಾ ಎಡದಂಡೆ ಕಾಲುವೆ ಹೋರಾಟ ಸಮಿತಿ ನೇತೃತ್ವದಲ್ಲಿ ಎರಡನೇ ಬೆಳಗೆ ನೀರು ಒದಗಿಸುವುದು, ನಾಲೆಯ ಶಾಶ್ವತ ದುರಸ್ಥಿ, ಸಮಾನಾಂತರ ಜಲಾಶಯ ನಿರ್ಮಾಣ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಂಧನೂರಿನಿಂದ ಮುನಿರಾಬಾದ್‌ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ಎಸ್. ಶಿವರಾಮಗೌಡ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಎನ್. ಎಸ್. ಬೋಸರಾಜು ಮೊದಲಾದ ಮುಖಂಡರು ಪಾಲ್ಗೊಂಡಿದ್ದರು.