ಕುಷ್ಟಗಿ(ಕೊಪ್ಪಳ):ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶಿರಸ್ತೇದಾರ ಸತೀಶ್ ಅವರಿಗೆ ಮನವಿ ಸಲ್ಲಿಸಿದರು.
ರೈತರು ಹಾಗೂ ಕಾರ್ಮಿಕರು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಮಳೆಯಿಂದ ಬೆಳೆ ಹಾನಿಯಾಗಿರುವುದಕ್ಕೆ ಇದುವರೆಗೂ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಿಲ್ಲ. ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಅದೆಷ್ಟೋ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಜೀವನ ನಡೆಸುವುದೂ ದುಸ್ತರವಾಗಿದೆ. ಇವೆಲ್ಲವುಗಳನ್ನು ಮರೆತು ಕಾರ್ಪೊರೇಟ್ ಕಂಪನಿಗಳನ್ನು ಬೆಳೆಸುವ ಕಾರ್ಯಕ್ಕೆ ಬಿಜೆಪಿ ಸರ್ಕಾರಗಳು ಮುಂದಾಗಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಮಸೂದೆಗಳನ್ನು ಶಾಸನಸಭೆಯಲ್ಲಿ ಚರ್ಚಿಸದೇ ಪೂರ್ವಭಾವಿ ಸಮಾಲೋಚನೆಗಳಿಲ್ಲದೇ ಅಂಗೀಕರಿಸಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿರುವುದು ವಿಪರ್ಯಾಸವಾಗಿದೆ. ಈ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ತೀವ್ರಗೊಳಿಸುವುದಾಗಿ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಲಾಗಿದೆ.
ಈ ವೇಳೆ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ್, ತಾಲೂಕು ಘಟಕದ ಅಧ್ಯಕ್ಷೆ ಶಕುಂತಲಮ್ಮ ಹಿರೇಮಠ, ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಕಟ್ಟಿಮನಿ, ಶೇಖರಗೌಡ ಕಡೂರು, ಮಂಜುನಾಥ ಕಟ್ಟಿಮನಿ, ಪರಶುರಾಮ ನಾಗರಾಳ ಮತ್ತಿತರರಿದ್ದರು.