ಕೊಪ್ಪಳ: ಕೋವಿಡ್ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೈತಿಕ ಹೊಣೆ ಹೊತ್ತು ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೊಪ್ಪಳದ ಕಾಂಗ್ರೆಸ್ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಆಗ್ರಹಿಸಿದ್ದಾರೆ.
ಬಿಜೆಪಿಯಲ್ಲಿರುವ ನನ್ನ ಸ್ನೇಹಿತರಿಗೆ ಯಡಿಯೂರಪ್ಪ ಮೇಲೆ ವಿಶ್ವಾಸವಿಲ್ಲ: 'ಕೈ' ಶಾಸಕ ರಾಘವೇಂದ್ರ ಹಿಟ್ನಾಳ್
ಬಿಜೆಪಿಯಲ್ಲಿ ನನಗೆ ಸ್ನೇಹಿತ ಶಾಸಕರಿದ್ದಾರೆ. ಅವರಿಗೆ ಯಡಿಯೂರಪ್ಪ ಮೇಲೆ ವಿಶ್ವಾಸವಿಲ್ಲ. ಸಚಿವರು ಹಾಗೂ ಅವರ ಪಕ್ಷದ ಶಾಸಕರ ಮಧ್ಯೆ ಹೊಂದಾಣಿಕೆ ಇಲ್ಲ ಎಂದು ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ರು.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನನಗೆ ಸ್ನೇಹಿತ ಶಾಸಕರಿದ್ದಾರೆ. ಅವರಿಗೆ ಯಡಿಯೂರಪ್ಪ ಮೇಲೆ ವಿಶ್ವಾಸವಿಲ್ಲ. ಅವರ ಪಕ್ಷದಲ್ಲಿ ಆಂತರಿಕ ಜಗಳ, ಅವಿಶ್ವಾವಿದೆ. ಸಿಎಂ , ಸಚಿವರು ಹಾಗೂ ಅವರ ಪಕ್ಷದ ಶಾಸಕರ ಮಧ್ಯೆ ಹೊಂದಾಣಿಕೆ ಇಲ್ಲ. ಕೋವಿಡ್ನಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲ ಕ್ಷೇತ್ರದಲ್ಲಿನ ಅಭಿವೃದ್ಧಿ ಎರಡು ವರ್ಷದಿಂದ ಕುಂಠಿತವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿಎಂ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುಮಾರು 30 ರಿಂದ 40 ಬ್ಯ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲಾಧಿಕಾರಿ 20 ಪ್ರಕರಣಗಳು ಎಂದು ಹೇಳುತ್ತಾರೆ. ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡಲು ಇಂಜೆಕ್ಷನ್ ಸಿಗುತ್ತಿಲ್ಲ. ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಜಿಲ್ಲಾಡಳಿತ ನೀಡಿದ ಮಾಹಿತಿಯ ವರದಿಗಿಂತ ಮೂರು ಪಟ್ಟು ಜನರು ಸಾವನ್ನಪ್ಪಿದ್ದಾರೆ ಎಂದರು. ಅವರ ಪಕ್ಷದ ಆಂತರಿಕ ಕಚ್ಚಾಟದಿಂದ ಬೇಸತ್ತು ರಾಜೀನಾಮೆ ನೀಡುವುದಾಗಿ ಸಿಎಂ ಹೇಳಿರಬಹುದು. ಆದರೆ, ಆಡಳಿತ ನಡೆಸುವಲ್ಲಿ ವಿಫಲವಾಗಿರುವ ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೆ ಅವರಿಗೆ ಹೆಚ್ಚಿನ ಗೌರವವಿರುತ್ತದೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಹೇಳಿದರು.