ಕೊಪ್ಪಳ:ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದರು. ಆರ್ ಎಸ್ ಎಸ್ ಮೂಲ ತಿಳಿದುಕೊಂಡು ಏನಾದರೂ ಮಾಡಬಹುದಿತ್ತು. ಆದರೆ ಆರ್ ಎಸ್ ಎಸ್ ಇಟಲಿಯನ್ ಮೂಲ ಅಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ನಾವು ಹಿಜಾಬ್ ನೋಡುತ್ತಿಲ್ಲ. ಅದರ ಹಿಂದೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವ ಕಾಣದ ಕೈಗಳನ್ನು ನೋಡುತ್ತಿದ್ದೇವೆ. ಈ ದೇಶದ ಕಾನೂನು ಉಲ್ಲಂಘನೆ ಮಾಡೋ ಪಿತೂರಿ ನೋಡುತ್ತಿದ್ದೇವೆ. ಇವತ್ತಲ್ಲ ನಾಳೆ ಇವರು ಇಡೀ ದೇಶದ ಕಾನೂನು ಉಲ್ಲಂಘನೆ ಮಾಡುತ್ತೇವೆ ಅನ್ನುತ್ತಾರೆ ಎಂದು ಹೇಳಿದರು.
ಕೆಲವು ರಾಜಕೀಯ ಪಕ್ಷಗಳು ಅವರ ವೋಟ್ ಬ್ಯಾಂಕ್ ಗಾಗಿ ಅವರನ್ನು, ಅವರ ವಿಚಾರಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸುವುದರಲ್ಲಿ ಎಡವಟ್ಟಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಗ್ರಾಮಗಳ ಜನರು ಭಾಗಿಯಾಗಿದ್ದಾರೆ. ಇತಿಹಾಸದ ಪುಸ್ತಕಗಳ ರಚನೆಯಲ್ಲಿ ಲೋಪವಾಗಿದ್ದು, ಮುಂಬರುವ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮದ ಮೂಲಕ ನಾವು ನಿಜವಾದ ಇತಿಹಾಸ ಪರಿಚಯಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.