ಕೊಪ್ಪಳ: ಕಾಂಗ್ರೆಸ್ ಮನೆಗೆ ಬಾಗಿಲೂ ಇಲ್ಲ, ಕಿಟಕಿಯೂ ಇಲ್ಲ, ಎಲ್ಲ ಬಟಾಬಯಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ. ಇಂದು ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ಶಾಸಕ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್‍ಗೆ ಮನೆ, ಬಾಗಿಲು, ಕಿಟಕಿ ಏನೂ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಭಿನ್ನಾಭಿಪ್ರಾಯ ಶುದ್ಧ ಸುಳ್ಳು:ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಮ್ಮ ಸರ್ವೋಚ್ಚ ನಾಯಕರು, ಅವರನ್ನು ಮುಂದಿಟ್ಟುಕೊಂಡೇ ಎಲ್ಲ ಕಾರ್ಯಕ್ರಮ ಮಾಡುತ್ತಿದ್ದೇವೆ. ಅವರ ಆಶೀರ್ವಾದ ನಮಗಿದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರು ಆಗಮಿಸಿದ್ದಾರೆ ಎಂದು ಹೇಳಿದರು.