ಕೊಪ್ಪಳ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಓರ್ವ ಸಾವನ್ನಪ್ಪಿ 10 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮಲ್ಲಿಕಾರ್ಜುನ ಕಂದಕೂರ (29) ಎಂಬಾತ ಸಾವನ್ನಪ್ಪಿದ್ದಾನೆ. ಗ್ರಾಮದಲ್ಲಿ ಈಗ ಜಾತ್ರೆ ನಡೆಯುತ್ತಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ಹಳೆ ದ್ವೇಷದಿಂದ ತಾರಕಕ್ಕೇರಿದೆ. ಬಳಿಕ ನಡೆದ ಘರ್ಷಣೆಯಲ್ಲಿ ಒಂದು ಗುಂಪಿನವರು ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಮಲ್ಲಿಕಾರ್ಜುನ ಕಂದಕೂರ ಸಾವನ್ನಪ್ಪಿದ್ದಾನೆ. ಇನ್ನುಳಿದಂತೆ 10 ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.