ಕುಷ್ಟಗಿ (ಕೊಪ್ಪಳ): ರಂಗಕರ್ಮಿ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ನಿಧನಕ್ಕೆ ಕುಷ್ಟಗಿ ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸುಭದ್ರಮ್ಮ ಮನ್ಸೂರು ಅವರು ಹಾಡಿರುವ ಹಾಡುಗಳ ಮೂಲಕ ನುಡಿ ನಮನ ಸಲ್ಲಿಸಲಾಯಿತು.
ಪಟ್ಟಣದ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ದಿ.ಸುಭದ್ರಮ್ಮ ಮನ್ಸೂರ್ ಅವರ ಒಡನಾಡಿ, ಅವರ ನಾಟಕಗಳಿಗೆ ತಬಲಾ ಸೇವೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಹಿರೇಮಠ, ಸುಭದ್ರಮ್ಮ ಮನ್ಸೂರ್ ಕಲಾ ಪ್ರೌಢಿಮೆ ಸ್ಮರಿಸಿ ಸುಭದ್ರಮ್ಮ ಕರ್ನಾಟಕದ ಮುತ್ತು, ಇದೀಗ ಕಣ್ಮರೆಯಾಗಿದ್ದಾರೆ ಎಂದರು.
ದಿ. ಸುಭದ್ರಮ್ಮ ಮನ್ಸೂರು ಅವರಿಗೆ ನುಡಿನಮನ ತಾಜುದ್ದೀನ್ ದಳಪತಿ ಮಾತನಾಡಿ, ಸುಭದ್ರಮ್ಮ ಮನ್ಸೂರ್ ಅವರಿಗೆ ಕುಷ್ಟಗಿ ತಾಲೂಕಿನ ನಂಟು ಇತ್ತು. ಶಾಸಕರಾಗಿದ್ದ ಹನುಮಗೌಡ ಪಾಟೀಲ ಅವರು, ರಕ್ತ ರಾತ್ರಿ ನಾಟಕದಲ್ಲಿ ಅರ್ಜುನ ಪಾತ್ರಧಾರಿಯಾಗಿ ದ್ರೌಪದಿ ಪಾತ್ರಧಾರಿಯಾಗಿ ಸುಭದ್ರಮ್ಮ ಮನ್ಸೂರ್ ಅವರೊಂದಿಗೆ ಅಭಿನಯಿಸಿರುವುದನ್ನು ಸ್ಮರಿಸಿದರು.
ರಕ್ತ ರಾತ್ರಿ ಪೌರಾಣಿಕ ನಾಟಕದಲ್ಲಿ ದ್ರೌಪದಿ ಪಾತ್ರ ಅವರಂತೆ ಯಾರೂ ಮಾಡಲು ಸಾಧ್ಯವಿಲ್ಲ. ಅವರಂತಹ ಅಭಿಜಾತ ಕಲಾವಿದೆ ಮತ್ತೆ ಹುಟ್ಟಲು ಸಾಧ್ಯವಿಲ್ಲ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ, ಪರಸಪ್ಪ ಪಂಚಮ, ಹ.ಯ. ಈಟಿಯವರ್, ತಾಲೂಕಾ ಕಸಾಪ ಅಧ್ಯಕ್ಷ ಉಮೇಶ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬಾಕಳೆ, ದೇವೆಂದ್ರಪ್ಪ ಬಡಿಗೇರ, ಎಂ.ಡಿ. ನಂದವಾಡಗಿ, ಹೆಚ್. ಮಹೇಶ ಸೇರಿದಂತೆ ಮತ್ತಿತರರಿದ್ದರು.