ಕೊಪ್ಪಳ:ಕೊರೊನಾದಿಂದ ಸಾವನ್ನಪ್ಪಿರುವವರಿಗೆ ಸರ್ಕಾರ ಇತ್ತೀಚಿಗೆ ಒಂದು ಲಕ್ಷ ರೂ ಪರಿಹಾರ ಘೋಷಿಸಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಸುಮಾರು 50 ಕ್ಕೂ ಹೆಚ್ಚು ಜನರ ಕುಟುಂಬಕ್ಕೆ ಸರ್ಕಾರದಿಂದ ಬರುವ ಈ ಪರಿಹಾರಧನ ಕೈತಪ್ಪುವ ಆತಂಕ ಎದುರಾಗಿದೆ.
ಸರ್ಕಾರದ ಪರಿಹಾರ ಸಿಗೋದು ಅನುಮಾನ ಕೊರೊನಾ ಸೋಂಕಿನಿಂದ ಕೊಪ್ಪಳ ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಎರಡನೇ ಅಲೆಯಲ್ಲಿ 268 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 54 ಜನರು ಕೋವಿಡ್ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಸಾವನ್ನಪ್ಪಿರುವ ಈ 54 ಜನರ ಆರ್ಟಿಪಿಸಿಆರ್ ಅಥವಾ ರ್ಯಾಟ್ ಟೆಸ್ಟ್ ವರದಿ ನೆಗೆಟಿವ್ ಇತ್ತು. ಆದರೆ ಎಚ್ಆರ್ ಸಿಟಿ ಸ್ಕ್ಯಾನ್ ಮಾಡಿಸಿದಾಗ ವರದಿಯಲ್ಲಿ ಕೊರೊನಾ ಲಕ್ಷಣಗಳು ಇದ್ದ ಕಾರಣ ಅವರುಗಳಿಗೆ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಕೋವಿಡ್ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೀಗೆ ಎಚ್ಆರ್ ಸಿಟಿ ಸ್ಕ್ಯಾನ್ ವರದಿಯಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದು ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಸಾವನ್ನಪ್ಪಿದವರಿಗೆ ಸರ್ಕಾರದ ಗೈಡ್ಲೈನ್ಸ್ ಪ್ರಕಾರ ಕೋವಿಡ್ನಿಂದಾದ ಸಾವು ಎಂದು ಪರಿಗಣಿಸುವುದಿಲ್ಲ. ಆದರೆ ಲಕ್ಷಣಗಳು ಇರುವುದರಿಂದ ಅವರಿಗೆ ಕೊರೊನಾ ಚಿಕಿತ್ಸೆ ನೀಡಲಾಗಿರುತ್ತದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರ ಡಾ. ಟಿ. ಲಿಂಗರಾಜು.
ಕೊರೊನಾದಿಂದ ಸಾವನ್ನಪ್ಪಿದವರಿಗೆ ಸರ್ಕಾರ ಘೋಷಣೆ ಮಾಡಿರುವ ಒಂದು ಲಕ್ಷ ರೂಪಾಯಿ ಪರಿಹಾರ ಹಣ ಬರಬೇಕಾದರೆ ರ್ಯಾಟ್ ಅಥವಾ RTPCR ಮೂಲಕ ಕೊರೊನಾ ಸೋಂಕು ದೃಢಪಟ್ಟಿರಬೇಕು.. ಹೀಗಾಗಿ ಅವುಗಳ ವರದಿ ನೆಗೆಟಿವ್ ಬಂದು, ಎಚ್ಆರ್ ಸಿಟಿ ಸ್ಕ್ಯಾನ್ ವರದಿಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರದ ಪರಿಹಾರ ಮರೀಚಿಕೆಯಾಗಲಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಅಂತಹ 50 ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದ ಪರಿಹಾರ ಸಿಗೋದು ಡೌಟ್ ಎನ್ನಲಾಗ್ತಿದೆ.