ಗಂಗಾವತಿ: ಜನ ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಚಿರತೆಗಳ ಹಾವಳಿ ತಡೆಗೆ ನಾನಾ ಪ್ರಯೋಗಗಳನ್ನು ನಡೆಸಿ ವಿಫಲವಾಗಿದ್ದರಿಂದ ಬೇಸತ್ತು ಹೋಗಿರುವ ಅರಣ್ಯ ಇಲಾಖೆ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.
ತಾಲೂಕಿನ ಆನೆಗೊಂದಿ ಸುತ್ತಲೂ ಹೆಚ್ಚಾದ ಚಿರತೆ ಹಾವಳಿಯಿಂದಾಗಿ ಈಗಾಗಲೆ ಇಬ್ಬರು ಯುವಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಲ್ಲದೇ ಜಾನುವಾರುಗಳು ಗಾಯಗೊಂಡಿವೆ. ಈ ಹಿನ್ನೆಲೆ ಚಿರತೆ ಜಾಡು ಪತ್ತೆ ಹಚ್ಚಲು ಇದೀಗ ಅರಣ್ಯ ಇಲಾಖೆ, ಆನೆಗಳ ಮೊರೆ ಹೋಗಿದ್ದು, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಎರಡು ಆನೆಗಳನ್ನು ಕರೆಯಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವ ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದೆ.
ಇಂದು ಒಂದು ಗಂಡು, ಒಂದು ಹೆಣ್ಣು ಆನೆಗಳು ವಿರುಪಾಪುರ ಗಡ್ಡೆಯಲ್ಲಿ ಮಾವುತರ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.