ಕುಷ್ಟಗಿ(ಕೊಪ್ಪಳ):ಶಿರಾ ವಿಧಾನಸಭೆ ಚುನಾವಣೆಗೋಸ್ಕರ ಸರ್ಕಾರ ಅಖಂಡ ಗೊಲ್ಲ (ಯಾದವ) ಸಮುದಾಯವನ್ನು ಊರು ಗೊಲ್ಲ, ಕಾಡು ಗೊಲ್ಲ ಎಂದು ಪ್ರತ್ಯೇಕಿಸುವ ಮೂಲಕ ಅಖಂಡ ಉತ್ತರ ಕರ್ನಾಟಕ ಗೊಲ್ಲರ ಉಪ ಪಂಗಡಗಳನ್ನು ಒಡೆಯುತ್ತಿದೆ ಎಂದು ಅಖಂಡ ಉತ್ತರ ಕರ್ನಾಟಕ ಗೊಲ್ಲ ಸಮುದಾಯದ ಹೋರಾಟ ಸಮಿತಿಯ ಸಂಚಾಲಕ ಮೇಘರಾಜ್ ಯಾದವ್ ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಗೊಲ್ಲ ಸಮುದಾಯದ ಕಿಡಿ ಪಟ್ಟಣದಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕಿಸುವ ಸಂದರ್ಭದಲ್ಲಿ ಆಗ ಯಡಿಯೂರಪ್ಪ ಅಖಂಡ ವೀರಶೈವ, ಲಿಂಗಾಯತ ಪ್ರತ್ಯೇಕಿಸದಂತೆ ಹೋರಾಟ ಮಾಡಿದ್ದರು. ಈಗ ಸಿಎಂ ಆಗಿರುವ ಯಡಿಯೂರಪ್ಪ ಅವರು, ಶಿರಾ ವಿಧಾನಸಭೆ ಉಪ ಚುನಾವಣೆಗಾಗಿ ಗೊಲ್ಲರ ಸಮುದಾಯದಲ್ಲಿ ಗೊಲ್ಲ ಅಭಿವೃಧ್ಧಿ ನಿಗಮ ಮತ್ತು ಕಾಡು ಗೊಲ್ಲ ಅಭಿವೃಧ್ಧಿ ನಿಗಮ ಎನ್ನುವ ದ್ವಂದ್ವ ಸೃಷ್ಟಿಸಿರೋದು ಯಾಕೆ ಅಂತಾ ಪ್ರಶ್ನಿಸಿದರು.
ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ 20ರಿಂದ 30 ಲಕ್ಷ ಗೊಲ್ಲ ಸಮುದಾಯದವರಿದ್ದಾರೆ. ಹಾಗಾಗಿ, ಬಿಜೆಪಿ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಕೇವಲ ತುಮಕೂರು, ಚಿತ್ರದುರ್ಗ ಜಿಲ್ಲೆಗೋಸ್ಕರ ರಾಜ್ಯದ ಉಳಿದ ಜಿಲ್ಲೆಗಳ ಅಖಂಡ ಗೊಲ್ಲ ಸಮುದಾಯವನ್ನು ಒಡೆಯುತ್ತಿರುವುದನ್ನು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಗೊಲ್ಲರ ಪರಿಸ್ಥಿತಿ ಶೋಚನೀಯವಾಗಿದೆ.
ಸಮಗ್ರ ಗೊಲ್ಲರ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರ್ಪಡೆಗೆ ನಮ್ಮ ಹೋರಾಟವಿದೆ. ಶ್ರೀ ಕೃಷ್ಣ ಸ್ಥಾಪಿಸಿದ ಯಾದವ ಸಮಾಜದಲ್ಲಿ ಸಿಎಂ ಬಿಎಸ್‌ವೈ ಕಲಹ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ದುರಗಪ್ಪ ಗುಳೇದ್, ಶಿವಪ್ಪ ಗೊಲ್ಲರ್, ಸುರೇಶ ಗೊಲ್ಲರ್, ದುರ್ಗಪ್ಪ ಬಣಗಾರ, ಗೊಲ್ಲರೆಪ್ಪ ಗೊಲ್ಲರ್, ಚಂದ್ರಶೇಖರ ಗೊಲ್ಲರ್, ಉಮೇಶ ಗೊಲ್ಲರ್ ಹಾಗೂ ಇತರರು ಇದ್ದರು.