ಗಂಗಾವತಿ(ಕೊಪ್ಪಳ):ಗಂಗಾವತಿ ಕ್ಷೇತ್ರದ ಅಭಿವೃದ್ಧಿಯ ಪರವಾಗಿ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತನಾಡಿದಾಗ, ಅವರು ಚೆನ್ನಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ ಜನಾರ್ದನರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ವಿಚಾರದ ಬಗ್ಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ ಐದು ಯೋಜನೆಗಳ ಜಾರಿ ಬಗ್ಗೆ ಏನು ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ತಮ್ಮ ಮುಂದೆಯೇ ಇದೆ. ಅಂದರೆ ಎಲ್ಲಿಲ್ಲಿ ಹಣವನ್ನು ಹಂಚಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಯೋಜನೆಗಳನ್ನು ಮಾಡಿಕೊಂಡಿದ್ದಾರೆ ಎಂದರು.
ಸರ್ಕಾರದ ಉಚಿತ ಯೋಜನೆಗಳಿಂದ ಕೇವಲ ಆರು ತಿಂಗಳಲ್ಲಿ ರಾಜ್ಯದ ಮೇಲೆ ದೊಡ್ಡ ಆರ್ಥಿಕ ಹೊರೆ ಬೀಳಲಿದ್ದು, ಇದರಿಂದ ಸಮಸ್ಯೆ ಆರಂಭವಾಗಲಿದೆ ಎಂಬ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸುಮ್ಮನೆ ಮಾತನಾಡಬಾರದು, ಹಲವು ಬಾರಿ ಹಣಕಾಸು ಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಸಮರ್ಥವಾಗಿ ಹಣಕಾಸು ಇಲಾಖೆಯನ್ನು ನಿಭಾಯಿಸಿದ್ದಾರೆ ಎಂದರು.
ಅಲ್ಲದೇ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಹದಿನಾಲ್ಕು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಯಾವ ಯೋಜನೆಗೆ ಎಲ್ಲಿಂದ ಮತ್ತು ಹೇಗೆ ಹಣ ಹೊಂದಿಸಬೇಕು ಎಂಬ ಎಲ್ಲಾ ಮಾಹಿತಿ ಇದೆ. ನಾನು ಗಂಗಾವತಿ ವಿಧಾನಸಭಾದ ಅಭಿವೃದ್ದಿಯ ಬಗ್ಗೆ ಅವರನ್ನು ಭೇಟಿಯಾಗಿ ಮಾತನಾಡಿದಾಗ, ಉತ್ತಮವಾಗಿ ಸ್ಪಂದಿಸಿದ್ದಾರೆ. ನನಗೆ ಅವರ ಮೇಲೆ ನಂಬಿಕೆ ಇದೆ ಎಂದರು.
ತಿರುಪತಿಗೆ ನಂದಿನಿ ತುಪ್ಪ: ವಿಶ್ವದ ಏಕೈಕ ಅತಿದೊಡ್ಡ ಹಿಂದುಗಳ ಆರಾಧ್ಯ ತಾಣವಾಗಿರುವ ತಿರುಪತಿ ದೇವಸ್ಥಾನಕ್ಕೆ ರಾಜ್ಯದಿಂದ ನಂದಿನಿ ತುಪ್ಪ ಕಳಿಸುವುದೇ ದೊಡ್ಡ ಗೌರವ. ಇಂತಹ ಕೆಲಸದಿಂದ ಹಿಂದಕ್ಕೆ ಸರಿದಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ರೆಡ್ಡಿ ಪ್ರತಿಕ್ರಿಯಿಸಿದರು.