ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಸ್ಥಾಪಿತವಾದ ದೇಶದ ಮೊದಲ ಟಾಯ್ ಕ್ಲಸ್ಟರ್ನ ಏಕಸ್ ಕಂಪನಿಯ ಆಟಿಕೆ ವಸ್ತುಗಳ ತಯಾರಿಕಾ ಘಟಕಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಭೂಮಿಪೂಜೆ ನೆರವೇರಿಸಿದರು.
ಭಾನಾಪುರ ಗ್ರಾಮದ ಬಳಿ ಸ್ಥಾಪನೆಯಾಗಿರುವ ಆಟಿಕೆ ವಸ್ತುಗಳ ತಯಾರಿಕಾ ಘಟಕ ಹಾಗೂ ಕ್ಲಸ್ಟರ್ನಿಂದ ಈ ಭಾಗದ ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ. ಈ ದಿಸೆಯಲ್ಲಿ ಏಕಸ್ ಕಂಪನಿ ಕಾರ್ಯೋನ್ಮುಖವಾಗಲಿದೆ ಎಂದು ಏಕಸ್ ಕಂಪನಿಗೆ ಸಿಎಂ ಶುಭ ಹಾರೈಸಿದರು.
ಅಲ್ಲದೆ ಬಂಡವಾಳ ಸೆಳೆತದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಈ ವರ್ಷ ಸೆಳೆತವಾದ ಬಂಡವಾಳದಲ್ಲಿ ಕರ್ನಾಟಕದ್ದು ಶೇ. 41ರಷ್ಟಿದೆ. ಈ ಮೂಲಕ ದೇಶದಲ್ಲಿ ಬಂಡವಾಳ ಸೆಳೆತದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಪಾರಂಪರಿಕ ಕಿನ್ನಾಳ ಕಲೆಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಈಗ ಮತ್ತೆ ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದೆ. ಸಾವಿರಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.