ಕೊಪ್ಪಳ:ಬಿಟ್‌ಕಾಯಿನ್ ನಾನಂತೂ ನೋಡಿಲ್ಲ. ಇದು ಕಾಂಗ್ರೆಸ್ ಕಾಲದಲ್ಲಿ ನಡೆದ ಅವ್ಯವಹಾರ. 2016 ರಲ್ಲಿ ಬಿಟ್‌ಕಾಯಿನ್ ಹಗರಣ (Bitcoin scam) ನಡೆದಿದೆ ಎಂದು ಸುರ್ಜೇವಾಲ ಹೇಳುತ್ತಿದ್ದಾರೆ. ಆಗ ಅಧಿಕಾರದಲ್ಲಿ ಯಾರಿದ್ದರು?, ಬರೋಬ್ಬರಿ ತನಿಖೆ ಮಾಡಿದ್ದರೆ ಎಲ್ಲವೂ ಅವತ್ತೇ ಬಹಿರಂಗವಾಗುತ್ತಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಬಿಟ್‌ಕಾಯಿನ್ ವಿಚಾರದಲ್ಲಿ ನಮ್ಮ ನೀತಿ ಸ್ಪಷ್ಟವಾಗಿದೆ. ಯಾರೇ ಇದ್ದರೂ ಎಷ್ಟೇ ದೊಡ್ಡವರಿದ್ದರೂ ನಾವು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲವೂ ತನಿಖೆಯಲ್ಲಿ ಬಯಲಾಗಲಿದೆ ಎಂದು ಬೊಮ್ಮಾಯಿ ಹೇಳಿದರು.
'ಕೊಪ್ಪಳಕ್ಕೆ ಮಹಾನ್ ಲೀಡರ್ ಅನ್ಯಾಯ ಮಾಡಿದ್ದಾರೆ':
ಕಾಂಗ್ರೆಸ್ ಅರಿವಿಗೆ ಕಾಲುವೆ ಸಮಸ್ಯೆ ಬಂದಿರಲಿಲ್ಲ. ಇದು ಕಾಂಗ್ರೆಸ್ ನೀತಿ. ಕೊಪ್ಪಳ ಏತ ನೀರವಾರಿ ಯೋಜನೆಗೆ ಕಾಂಗ್ರೆಸ್ ಹಣ ಕೊಡಲಿಲ್ಲ. ನಾನು ನೀರಾವರಿ ಸಚಿವನಾದ ಮೇಲೆ ಕೊಪ್ಪಳ ಏತ ನೀರಾವರಿಗೆ ಹಣ ಬಿಡುಗಡೆ ಮಾಡಿದೆ. 2009ರಲ್ಲಿ ಕೊಪ್ಪಳ ಏತ ನೀರಾವರಿಗೆ ಯೋಜನೆ ಆರಂಭವಾಗಿದೆ. ಕೊಪ್ಪಳಕ್ಕೆ ಒಬ್ಬ ಮಹಾನ್ ಲೀಡರ್ ಅನ್ಯಾಯ ಮಾಡಿದ್ದಾನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಮ್ಮ ಯೋಜನೆಗೆ ಶನಿ ಹಿಡೀತು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ನಡಿಗೆ ಆರಂಭಿಸಿದ್ದರು. ಕೃಷ್ಣೆಯ ಮೇಲೆ ಆಣೆ ಮಾಡಿದರು. ಆದ್ರೆ ಕೃಷ್ಣೆಯ ಯೋಜನೆ ಪೂರೈಸದ ಹಿನ್ನೆಲೆಯಲ್ಲಿ ಅವರ ಅಧಿಕಾರ ಹೋಯಿತು ಎಂದು ಕೈ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲ ಸಂಗಮೇಶನ ಮೇಲೆ ಆಣೆ ಮಾಡಿದರು. ಒಂದೂವರೆ ವರ್ಷದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣವಾಗುತ್ತದೆ. ಶಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್‌ನವರು ಕೊಪ್ಪಳ ಮರೆತು ಬಿಟ್ಟಿದ್ದರು. ಜನಪರ ಕೆಲಸ ಮಾಡುವುದು ಸರ್ಕಾರಕ್ಕೆ ಬದ್ದತೆ ಇರಬೇಕು. ಕಾಂಗ್ರೆಸ್‌ನವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಅವರ ಕನಸು ಭಗ್ನವಾಗಿದೆ. ಇದೀಗ ನಮ್ಮ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ದೂರಿದರು.
ಗವಿಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ:
ಗವಿಸಿದ್ದೇಶ್ವರ ಶ್ರೀಗಳು ಕೆರೆ, ಹಳ್ಳ ಹೂಳೆತ್ತುವ ಕೆಲಸ ಮಾಡಿದ್ದಾರೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಜನರಿಗೆ ಒಳಿತಾಗಿದೆ ಎಂದು ಶ್ರೀಗಳ ಕಾರ್ಯವನ್ನು ಸಿಎಂ ಇದೇ ಸಂದರ್ಭದಲ್ಲಿ ಹೊಗಳಿದರು.