ಕೊಪ್ಪಳ: ಭಾರತವನ್ನು ಒಡೆದಾಳುವುದು ಬ್ರಿಟಿಷರ ಪಾಲಿಸಿಯಾಗಿತ್ತು. ಅದನ್ನೇ ಮುಂದುವರೆಸಿರುವ ಕಾಂಗ್ರೆಸ್ಸಿಗರು ಕೂಡ ಬ್ರಿಟಿಷರ ಸಂತತಿಯೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕುಷ್ಟಗಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಒಡೆಯುವ ಕೆಲಸದಲ್ಲಿ ಕಾಂಗ್ರೆಸ್ ತೊಡಗಿದೆ. ರಾಜಕೀಯ ಲಾಭಕ್ಕಾಗಿ ಲಿಂಗಾಯತರನ್ನು ಒಡೆದರು. ಈ ಹಿಂದೆ ದೇಶದ ವಿಭಜನೆ ಮಾಡಿದವರು ಇವರೇ. ಈಗ ಭಾರತ್ ಜೋಡೋ ಎಂದು ಮತ್ತೆ ಯಾತ್ರೆ ಮಾಡುತ್ತಿದ್ದಾರೆ. ಇವರು ಜೋಡಿಸುವವರಲ್ಲ ಒಡೆದಾಳುವವರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ಯಾವ ಗಿರಾಕಿ?: ಬಸವರಾಜ ಬೊಮ್ಮಾಯಿ ಕೂಡ ನಮ್ಮ ಗಿರಾಕಿನೇ ಎನ್ನುವ ಸಿದ್ದರಾಮಯ್ಯ ನೀವು ಯಾವ ಗಿರಾಕಿ ಅಂತ ನಮಗೆ ಗೊತ್ತು. ಈ ಹಿಂದೆ ಜನತಾದಳದಲ್ಲಿ ಇದ್ದಾಗ ಸೋನಿಯಾ ಗಾಂಧಿ ಬಗ್ಗೆ ಏನೇನು ಮಾತಾಡಿದಿರಿ ಅಂತ ಸ್ವಲ್ಪ ಕ್ಯಾಸೆಟ್ ರಿವೈಂಡ್ ಮಾಡಿದ್ರೆ ನೀವು ಯಾವ ಗಿರಾಕಿ ಎಂದು ಗೊತ್ತಾಗುತ್ತದೆ ಅಂತಾ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ನಿಮಗೆ ದಲಿತರ ಮತ ಕೇಳಲು ಯಾವ ನೈತಿಕ ಹಕ್ಕಿಲ್ಲ; ರಾಗಾ ಯಾತ್ರೆ ವ್ಯರ್ಥವೆಂದ ಯಡಿಯೂರಪ್ಪ
ಕಾಂಗ್ರೆಸ್ ಪಕ್ಷ ಈಗಾಗಲೇ ಬೀದಿಗೆ ಬಂದಿದೆ. ಪಾದಯಾತ್ರೆ ಹೆಸರಲ್ಲಿ ಮತ್ತೊಂದು ನಾಟಕ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ನಾವು ಕೃಷ್ಣ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಆಣೆ ಪ್ರಮಾಣ ಮಾಡಿದರು. 50 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ ಎಂದವರು ಏನು ಮಾಡಿದರು?. ಕೊಪ್ಪಳ ಏತ ನಿರಾವರಿ ಯೋಜನೆಯೂ ಇದರಲ್ಲೇ ಇತ್ತು. ಅಧಿಕಾರ ಬಂದ ಮೆಲೆ ಎಲ್ಲವನ್ನು ಮರೆತರು. ಮತ್ತೆ ಈಗ ಪಾದಯಾತ್ರೆ ಹೊರಟಿದ್ದಾರೆ. ಜನ ಒಮ್ಮೆ ಮೋಸ ಹೋಗಬಹುದು. ಆದರೆ, ಪದೇ ಪದೇ ಮೋಸ ಹೋಗಲಾರರು ಎಂದರು.
ಕುಷ್ಟಗಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಕೃಷ್ಣ ಬಿ ಸ್ಕೀಂ ಉದ್ಘಾಟನೆ ನಾವೇ ಮಾಡುತ್ತೇವೆ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷ್ಣ ಬಿ ಸ್ಕೀಂ ಯೋಜನೆಗೆ ಅಡಿಗಲ್ಲು ಹಾಕಿದೆವು. ಮುಂದೆ ಕಾಂಗ್ರೆಸ್ ಸರ್ಕಾರ ಬಂತು. ಮತ್ತೆ ಈ ಯೋಜನೆಗೆ ಹಿನ್ನಡೆ ಆಯಿತು. ಈ ಯೋಜನೆಗೆ ನಯಾಪೈಸೆ ಅವರು ಕೊಡಲಿಲ್ಲ. ಆದರೆ, ಈಗ ನಮ್ಮ ಸರ್ಕಾರ ಮತ್ತೆ ಈ ಯೋಜನೆ ಕೈಗೆತ್ತಿಕೊಂಡಿದೆ. ನಾವೇ ಅದನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ದಲಿತರ ಮನೆಯಲ್ಲಿ ತಿಂಡಿ ಸವಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಮೂರು ಸಾವಿರ ಕೋಟಿ ಕೊಟ್ಟಿದೆ. ಉತ್ತರ ಕರ್ನಾಟಕ ಬಿಸಿಲ ನಾಡು, ಇಲ್ಲಿ ನೀರಿನ ಅಭಾವ ಹೆಚ್ಚು. ನೀರಾವರಿ ಕನಸಿನ ಮಾತಾಗಿತ್ತು. ಅವೆಲ್ಲವನ್ನ ಪರಿಗಣಿಸಿ ನಾವು ಕಲ್ಯಾ ಕರ್ನಾಟಕ ಅಭಿವೃದ್ಧಿಗೆ ಮುಂದಾಗಿದ್ದೇವೆ.
ಇದನ್ನೂ ಓದಿ:ಅಸ್ತಿತ್ವ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಜೋಡೋ ಯಾತ್ರೆ.. ಸಿಎಂ ಬೊಮ್ಮಾಯಿ ಲೇವಡಿ
ಹಿಂದುಳಿದವರ ಪರ ಎಂದು ಬೀಗುವ ಕಾಂಗ್ರೆಸ್ ಏನು ಮಾಡಿದ್ದೀರಿ?, ದೀನ ದಲಿತರ ಅಭಿವೃದ್ಧಿಗೆ ಏನು ಮಾಡಿದ್ದೀರಿ?. ಕೇವಲ ಬಜೆಟ್ನಲ್ಲಿ ಪ್ರಸ್ತಾಪವಾಗಿದೆಯೇ ಹೊರತು ಅದು ಯಾವತ್ತೂ ಕಾರ್ಯಗತವಾಗಿಲ್ಲ. ನಾವು ಹಾಗಲ್ಲ, ಹೇಳಿದ್ದನ್ನೇ ಮಾಡುತ್ತಿದ್ದೇವೆ. ಕನಕದಾಸರ ಹುಟ್ಟಿದ ಊರಿಂದ ಬಂದವನು ನಾನು. ಅವರ ತತ್ವ, ಆದರ್ಶಗಳ ಅಡಿಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಹಿಂದುಳಿದ ಸಮುದಾಯದ ಮೀಸಲಾತಿ ಹೆಚ್ಚಿಸಿದ್ದೇವೆ. ಕನಕದಾಸರ ಕಾಗಿನೆಲೆ ಅಭಿವೃದ್ಧಿಗೆ ಯಡಿಯೂರಪ್ಪನವರ ಅವಧಿಯಲ್ಲಿ 40 ಕೋಟಿ ರೂ. ನೀಡಿಲಾಗಿದೆ. ಸರ್ಕಾರದಿಂದ ವಾಲ್ಮೀಕಿ ಜಯಂತಿ ಮತ್ತು ಕನಕದಾಸರ ಜಯಂತಿ ಆಚರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ನಾವು ನೀಡುತ್ತಿದ್ದೇವೆ. ಅವರ ಹೆಸರೇಳಿಕೊಂಡು ಮತ ಕೇಳುವ ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಅಲ್ಪ ಸಂಖ್ಯಾತರ ಅಭಿವೃದ್ಧಿ ಹೆಸರಲ್ಲಿ ಆಸ್ತಿ ನುಂಗಿ ನೀರು ಕುಡಿದವರು ನೀವು, ಅವರನ್ನು ಉದ್ಧಾರ ಮಾಡಲಿಲ್ಲ. ಅವರ ಮತ ಕೇಳಲು ನಿಮಗೆ ನೈತಿಕ ಹಕ್ಕಿಲ್ಲ ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದರು.