ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಮಣ್ಣಿನ ಗಡಿಗೆಗಳು ಹಾಗೂ ರಾಜಸ್ತಾನಿ ಗಡಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಆದರೆ, ಕೊರೊನಾ ಭೀತಿಯಿಂದಾಗಿ ವ್ಯಾಪಾರ ಕುಂಠಿತಗೊಂಡಿದ್ದು, ನಷ್ಟ ಅನುಭವಿಸುವಂತಾಗಿದೆ.
ಸಾಮಾನ್ಯವಾಗಿ ಮಣ್ಣಿನ ಗಡಿಗೆ, ಹರವಿಗಳು ಬೇಸಿಗೆಯಲ್ಲಿ ಬಡವರ ಫ್ರಿಡ್ಜ್ ಆಗುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಿದೆ. ಬೆಳಗ್ಗೆ 9 ಗಂಟೆಯಾದರೆ ಸಾಕು ಬಿಸಿಲಿನ ಝಳ ಶುರುವಾಗಿ ತಾಪಮಾನ ಹೆಚ್ಚುತ್ತಾ ಹೋಗುತ್ತದೆ. ಬೇಸಿಗೆಯಲ್ಲಿ ತಂಪಾದ ಪಾನೀಯದ ಮೊರೆ ಹೋಗುವ ಜನರು ಮಣ್ಣಿನ ಮಡಿಕೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಕೊರೊನಾ ಹಿನ್ನೆಲೆ ಈ ವರ್ಷದ ವ್ಯಾಪಾರ ಹೇಳಿಕೊಳ್ಳುವಂತಿಲ್ಲ, ಕಳೆದ ವರ್ಷ ತಯಾರು ಮಾಡಿದ ಮಣ್ಣಿನ ಗಡಿಗೆ, ಮಡಿಕೆಗಳು ಹಾಗೆಯೇ ಉಳಿದುಕೊಂಡಿವೆ ಎಂದು ಸ್ಥಳೀಯ ಕುಂಬಾರರು ಬೇಸರ ವ್ಯಕ್ತಪಡಿಸಿದ್ದಾರೆ.