ಕೊಪ್ಪಳ: ನಗರದ ಎಸ್ಪಿ ಕಚೇರಿಯ ಬೆರಳಚ್ಚು(Fingerprint) ವಿಭಾಗದ ಪಿಎಸ್ಐವೊಬ್ಬರು ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾಹಿತಿ ನೀಡಿರುವುದು ಪಿಎಸ್ಐ ಮುತ್ತಣ್ಣ ಬಡಿಗೇರ್ ಎಂಬುವರ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೋಸ ಹೋಗಿರುವ ಮಹಿಳೆ ಹಾಗೂ ಕುಟುಂಬದವರು ನಿನ್ನೆ(ಶನಿವಾರ) ನ್ಯಾಯ ಕೇಳಲೆಂದು ಎಸ್ಪಿ ಕಚೇರಿಗೆ ಬಂದು ಮೌಖಿಕ ದೂರು ನೀಡಿದ್ದಾರೆ. ಆದರೆ ನಗರ ಠಾಣೆಯ ಪಿಐ ಅವರನ್ನು ಮನವೊಲಿಸಿ ಊರಿಗೆ ಕಳುಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಸ್ಪಿ ಕಚೇರಿಯಿಂದ ಪಿಎಸ್ಐ ಮುತ್ತಣ್ಣ ಪರಾರಿ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಮುತ್ತಣ್ಣ ಬಡಿಗೇರ್ ವರ್ತನೆಗೆ ಎಸ್ಪಿ ಟಿ. ಶ್ರೀಧರ್ ಅವರು ಗರಂ ಆಗಿದ್ದಾರೆ. ಅಲ್ಲದೇ ಮುತ್ತಣ್ಣನ ವಿರುದ್ಧ ಕ್ರಮ ಕೈಗೊಳ್ಳುವಂತೆ ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್, ದೂರು ನೀಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.