ಕುಷ್ಟಗಿ(ಕೊಪ್ಪಳ): ಭಾರತ ದೇಶ ಮತ್ತೊಮ್ಮೆ ವಿಶ್ವಗುರು ಎನ್ನಿಸಿಕೊಳ್ಳಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜರ ದ್ಯೇಯೋದ್ದೇಶಗಳನ್ನಿಟ್ಟುಕೊಂಡು ಹೊಸ ರೂಪದಲ್ಲಿ ಸಿಡಿದೇಳಬೇಕಿದೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಕರೆ ನೀಡಿದರು. ತಾಲೂಕಿನ ಹನುಮಸಾಗರದಲ್ಲಿ ಗುರುವಾರ ರಾತ್ರಿ ಬಸವೇಶ್ವರ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಮಿತಿ ಹನುಮಸಾಗರ ಇವರ ನೇತೃತ್ವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಪ್ರಯುಕ್ತ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಾಜಿ ವಿರೋಧಿಸುವ ಟ್ರೆಂಡ್ ಶುರುವಾಗಿದೆ: ಛತ್ರಪತಿ ಶಿವಾಜಿ ಮಹಾರಾಜರ ಚೈತನ್ಯವನ್ನು ಜೀವಂತವಾಗಿರಿಸಿಕೊಂಡಾಗ ಮಾತ್ರ ಅವರ ಆದರ್ಶಗಳಿಗೆ ಮೌಲ್ಯ ತುಂಬಿದಂತಾಗುತ್ತದೆ. ಇತ್ತೀಚೆಗೆ ಶಿವಾಜಿ ಮಹಾರಾಜರನ್ನು ವಿರೋಧಿಸುವ ಟ್ರೆಂಡ್ ಶುರುವಾಗಿದೆ. ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯ ಇರಲಿಲ್ಲವೇ?, ಆ ರಾಜರನ್ನು ಯಾಕೆ ವೈಭವೀಕರಿಸುವುದಿಲ್ಲ, ಮಹಾರಾಷ್ಟ್ರದ ಮೂಲದ ಶಿವಾಜಿ ಅವರನ್ನು ಇಲ್ಲೇಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಶಿವಾಜಿ ಮಹಾರಾಜರು ಹಿಂದವೀ ಸಾಮ್ರಾಜ್ಯ ವಿಸ್ತರಿಸಿಕೊಂಡು ಹಂಪಿಗೆ ಬಂದ ಸಂದರ್ಭದಲ್ಲಿ ಸ್ಥಳೀಯರು ಶಿವಾಜಿ ಅವರಿಗೆ ಇಲ್ಲಿಯೇ ಇದ್ದು ಬಿಡಿ. ನಮಗೊಬ್ಬ ಸಮರ್ಥ ರಾಜನ ಅಗತ್ಯವಿದೆ ಎಂದು ಕೇಳಿಕೊಂಡಿದ್ದರು. ಆಗ ಶಿವಾಜಿ ಅವರು, ನಾನು ನಾಶವಾಗಿರುವ ಹಿಂದೂ ವಿಜಯನಗರ ಸಾಮ್ರಾಜ್ಯವನ್ನು ಪುನರುತ್ಥಾನಕ್ಕೆ ಇಲ್ಲಿಗೆ ಬಂದಿರುವೆ. ಹಾಗಾಗಿ ಒಂದು ನಾನು ಊರಿಗೆ ಸೀಮಿತ ಅಲ್ಲ ಮತ್ತೊಮ್ಮೆ ಹಿಂದೂಗಳ ವಿಜಯನಗರ ಸಾಮ್ರಾಜ್ಯ ಕಟ್ಟಿಕೊಡುವುದಾಗಿ ಹೇಳಿದ್ದರು. ವಿಜಯನಗರ ಸಾಮ್ರಾಜ್ಯ ಶಿವಾಜಿ ಮಹಾರಾಜರಿಗೆ ಪ್ರೇರಣೆಯಾಗಿತ್ತು. ಶಿವಾಜಿ ಮಹಾರಾಜರು ಕನ್ನಡಿಗರಲ್ಲ, ಮಹಾರಾಷ್ಟ್ರದಲ್ಲಿ ಮರಾಠ ಸಮಾಜ ಕಟ್ಟಿದವರು ಎಂದು ತುಂಬಾ ಜನ ಪ್ರಶ್ನೆ ಮಾಡುವವರಿದ್ದಾರೆ. ಅಂತವರಿಗೆ ಶಿವಾಜಿ ಮಹಾರಾಜರು ಇಲ್ಲದೇ ಹೋಗಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಹೇಳಿ ಅರ್ಥೈಸಬೇಕಿದೆ ಎಂದರು.
ಜನರ ನಡುವೆ ಬದುಕಿದ ಮಹಾರಾಜ: ಹಿಂದವೀ ಸಾಮ್ರಾಜ್ಯದ ಅಧಿಪತಿ ಛತ್ರಪತಿ ಶಿವಾಜಿ ಮಹಾರಾಜರು ಒಂದೇ ಒಂದು ಅರಮನೆಯಲ್ಲಿ ರಾಜನಾಗಿ ಬದುಕಲಿಲ್ಲ. ಬದಲಾಗಿ ಜನರ ನಡುವೆ ಬದುಕಿದ ಧೀಮಂತ ನಾಯಕ. ಹಿಂದೂ ಸಾಮ್ರಾಜ್ಯ ಕಟ್ಟಿದ ಶಿವಾಜಿ ಮಹಾರಾಜರ ಬಗ್ಗೆ ಮಕ್ಕಳು ಶಾಲೆಗಿಂತ ಇಂತಹ ವೇದಿಕೆಯಲ್ಲಿ ಕಲಿಯಬೇಕಿರುವುದು ಸಾಕಷ್ಟಿದೆ. ಶಿವಾಜಿ ಒಡೆದು ಆಳುವ ವರ್ಗವನ್ನು ಮೆಟ್ಟಿನಿಂತು ಹಿಂದೂ ಸಾಮ್ರಾಜ್ಯ ಕಟ್ಟಿದವರು. ಆ ಸಾಮ್ರಾಜ್ಯವನ್ನು ಕಟ್ಟಿ ಉಳಿಸಿಕೊಳ್ಳಬೇಕಿದೆ ಎಂದರು.