ಗಂಗಾವತಿ :ನಗರದ 20ನೇ ವಾರ್ಡ್ ಚಲುವಾದಿ ಓಣಿಯಲ್ಲಿ ನಗರಸಭೆಯ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಸಿಮೆಂಟ್ ಕಾಂಕ್ರೀಟ್ ರಸ್ತೆ ಮತ್ತು ಡ್ರೈನೇಜ್ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ ಎಂದು ಆರೋಪಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದರು.
ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಮಹಿಳೆಯರು ಕಾಮಗಾರಿ ತಡೆದು ಪ್ರತಿಭಟಿಸಿದರು. ಕಾಮಗಾರಿಗೆ ಬಳಸುತ್ತಿರುವ ಸಿಮೆಂಟ್, ಮರಳು ಮತ್ತು ಜಲ್ಲಿ ಕಲ್ಲಿನ ಪ್ರಮಾಣದ ಬಗ್ಗೆ ಕೇಳಿದರೆ ಗುತ್ತಿಗೆದಾರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಸ್ಥಳೀಯ ಮುಖಂಡ ಹನುಮಂತಪ್ಪ ಮೂಳೆ ಆರೋಪಿಸಿದ್ದಾರೆ.