ಗಂಗಾವತಿ: ನಗರದಲ್ಲಿ ಅಹಿತಕರ ಘಟನೆ ನಿಯಂತ್ರಿಸಲು ಮುಖ್ಯವಾಗಿ ರಾತ್ರಿ ಎಂಟರ ಬಳಿಕ ನಡೆಯುವ ಕೆಲ ಅನಿರೀಕ್ಷಿತ ಪ್ರಕರಣಗಳನ್ನು ತಡೆಯುವ ಉದ್ದೇಶಕ್ಕೆ ನಗರ ಮತ್ತು ಸಂಚಾರಿ ಪೊಲೀಸರು ನಗರದ ಒಂದೆರಡು ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ.
ಗಂಗಾವತಿ ನಗರದ ಎಂಜಿ ವೃತ್ತದಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು ನಗರದ ಹೃದಯಭಾಗವಾದ ಮಹಾತ್ಮ ಗಾಂಧಿ ವೃತ್ತದಲ್ಲಿ ಈಗಾಗಲೇ ಎರಡು ಕ್ಯಾಮರಾ ಅಳವಡಿಸಿದ್ದು, ಲಿಂಗಸೂಗೂರು ರಸ್ತೆ ಹಾಗೂ ನಗರದೊಳಗೆ ಪ್ರವೇಶ ಕಲ್ಪಿಸುವ ಬಸವಣ್ಣ ವೃತ್ತದ ಮಾರ್ಗದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗುವಂತೆ ಅಳವಡಿಸಲಾಗಿದೆ.
ರಾತ್ರಿ ಹತ್ತು ಗಂಟೆಯ ಬಳಿಕ ಬಹುತೇಕ ಸಾರಿಗೆ ವಾಹನಗಳು ಗಾಂಧಿ ವೃತ್ತವಾಗಿ ಸಾಗುತ್ತಿದ್ದು, ಅಪಘಾತ, ವಾಣಿಜ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ, ಅನುಮಾನಾಸ್ಪದ ಘಟನೆಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಲಿವೆ. ಈ ದೃಶ್ಯಗಳು ಸಹಾಯಕ್ಕೆ ಬರಲಿವೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಿದನ 24 ಗಂಟೆಯೂ ಸಿಸಿಟಿವಿ ಕ್ಯಾಮರಾ ಚಾಲನೆಯಲ್ಲಿದ್ದು, ನಗರ ಠಾಣೆಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ನಗರ ಠಾಣೆಯ ಮೂಲಕವೇ ನಗರದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಕಣ್ಗಾವಲು ಇಡಲು ಸಹಾಯಕವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.