ಗಂಗಾವತಿ (ಕೊಪ್ಪಳ): ಹೆಣ್ಣು ಮಗು ಎಂಬ ಕಾರಣಕ್ಕೆ ಆಗ ತಾನೇ ಹುಟ್ಟಿದ್ದ ಮಗುವನ್ನು ಎಸೆದು ಹೋಗಿದ್ದ ಘಟನೆ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿತ್ತು. ಬಳಿಕ ಮಗುವನ್ನು ಮಹಿಳೆಯರು ರಕ್ಷಣೆ ಮಾಡಿದ್ದರು. ಇದೀಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಸುರಕ್ಷಿತವಾಗಿದೆ.
ಮಗುವಿಗೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಆರೈಕೆ ಮಾಡಲಾಗಿದೆ. ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಮಗು 2.5 ಕೆ.ಜಿ ತೂಕವಿದ್ದು ಆರೋಗ್ಯದ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಾಲಕರ ಪತ್ತೆಗೆ ಈಗಾಗಲೇ ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳ ಗಮನಕ್ಕೆ ತರಲಾಗಿದೆ. ಜನರ ನೆರವು ಕೋರಲಾಗಿದೆ. ಪಾಲಕರು ಸಿಕ್ಕಲ್ಲಿ ಸೂಕ್ತ ದಾಖಲೆ, ಪುರಾವೆಗಳೊಂದಿಗೆ ಬಂದರೆ ಮಗುವನ್ನು ನೀಡಲಾಗುವುದು. ಎಸೆದು ಹೋಗಲು ಕಾರಣ ಕೇಳಿ ಸೂಕ್ತ ಕ್ರಮ ಕೈಗೊಂಡು ಮಗುವನ್ನು ಷರತ್ತುಗಳ ಮೇಲೆ ಹಸ್ತಾಂತರ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಜೂನ್ 11ರಂದು ಗಂಗಾವತಿ ತಾಲ್ಲೂಕಿನ ಪ್ರಗತಿ ನಗರದ ಹೊರವಲಯದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುವ ಸ್ಥಳದಲ್ಲಿ ಮಗುವನ್ನು ಎಸೆದು ಹೋಗಲಾಗಿತ್ತು. ಬೆಳಗಿನ ಜಾವ ಮಗು ಅಳುತ್ತಿರುವ ಧ್ವನಿ ಕೇಳಿದ ಸ್ಥಳೀಯ ಮಹಿಳೆಯರು ರಕ್ಷಣೆ ಮಾಡಿದ್ದರು.
ಜಮೀನಿನಲ್ಲಿ ನವಜಾತ ಶಿಶು ಪತ್ತೆ:ಕಳೆದ ಏಪ್ರಿಲ್ 5ರಂದು ಆನೇಕಲ್ ತಾಲೂಕಿನ ಹುಲ್ಲಹಳ್ಳಿಯ ಖಾಲಿ ಜಮೀನೊಂದರಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಬನ್ನೇರುಘಟ್ಟ ಪೊಲೀಸರು ರಕ್ಷಣೆ ಮಾಡಿದ್ದರು. ಸಿದ್ದಲಿಂಗ ರೆಡ್ಡಿ ಎಂಬುವರ ಜಮೀನಿನಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ನವಜಾತ ಶಿಶು ಕಂಡುಬಂದಿತ್ತು. ಸ್ಥಳೀಯರು ಬನ್ನೇರುಘಟ್ಟ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಶಿಶು ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಕವಿತಾ ಹಾಗೂ ಇನ್ಸ್ಪೆಕ್ಟರ್ ಉಮಾಮಹೇಶ್ ಶಿಶುವನ್ನು ಜಿಗಣಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಆನೇಕಲ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಹೆಚ್ಚಿನ ಆರೈಕೆಗೆ ಕಳುಹಿಸಿಕೊಡಲಾಗಿತ್ತು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿಶುವನ್ನು ಕಚ್ಚಿಕೊಂಡು ತಿರುಗಾಡಿದ ನಾಯಿ : ನಾಯಿಯೊಂದು ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ತಿರುಗಾಡಿದ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿತ್ತು. ಕಳೆದ ಮಾರ್ಚ್ 31 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ನಾಯಿ ಬಾಯಿಯಿಂದ ಶಿಶುವನ್ನು ಕಚ್ಚಿಕೊಂಡು ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಬಳಿಕ ಅದನ್ನು ಅಲ್ಲಿಂದ ಓಡಿಸಿದ್ದರು. ಆದರೆ, ಅಷ್ಟರಲ್ಲೇ ಶಿಶು ಮೃತಪಟ್ಟಿರುವುದು ಗೊತ್ತಾಗಿತ್ತು.
ಇದನ್ನೂ ಓದಿ :ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ:ಪೊಲೀಸರಿಂದ ಶಿಶು ರಕ್ಷಣೆ