ಕೊಪ್ಪಳ/ಬಳ್ಳಾರಿ: ಕಳೆದ ಒಂದು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಇಡೀ ತಿಂಗಳು ಜಾಗೃತವಾಗಿದ್ದ ಅಭ್ಯರ್ಥಿಗಳು ಇಂದು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶ್ರೀರಾಮುಲು ನಗರದ ತಮ್ಮ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಜನ ಅಭ್ಯರ್ಥಿಗಳು ಇಂದು ರಿಲ್ಯಾಕ್ಸ್ ಮೂಡಿನಲ್ಲಿದ್ದು, ಮತಗಳ ಗಳಿಕೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಮೂರು ಜನರು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ.
ಮನೆಯ ಸದಸ್ಯರೊಂದಿಗೆ ಉಪಹಾರ ಸೇವಿಸಿದ ಶ್ರೀರಾಮುಲು, ದಿನಪತ್ರಿಕೆಗಳನ್ನು ತಿರುವಿ ಹಾಕಿದರು. ಮೊಬೈಲ್ನಲ್ಲಿ ಬರುವ ಸಂದೇಶಗಳನ್ನು ಗಮನಿಸುತ್ತಾ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ನಿನ್ನೆಯಷ್ಟೇ ಮುಗಿದಿರುವ ಮತದಾನದ ಹಿನ್ನೆಲೆಯಲ್ಲಿ ಯಾವ ಯಾವ ಮತಗಟ್ಟೆಯಲ್ಲಿ ತಮ್ಮ ಪಕ್ಷಕ್ಕೆ ಎಷ್ಟು ಮತ ಬಂದಿರಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸ್ನೇಹಿತರು, ಹಿತೈಷಿಗಳು ಮತ್ತು ರಾಜಕೀಯ ಸಂಬಂಧಿತ ಗೆಳೆಯರೊಂದಿಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸುತ್ತಿರುವುದು ಕಂಡು ಬಂದಿತು.
ಕೊಪ್ಪಳ ವಿಧಾನಸಭೆಗೆ ಸ್ಪರ್ಧಿಸಿರುವ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಕಳೆದ ಒಂದು ತಿಂಗಳು ಬಿಡುವಿಲ್ಲದೆ ಪ್ರಚಾರದಲ್ಲಿ ತೊಡಗಿದ್ದರು. ಇಂದು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಇಂದು ಮುಂಜಾನೆಯಿಂದ ರಿಲ್ಯಾಕ್ಸ್ ಮೂಡಲ್ಲಿರುವ ಹಿಟ್ನಾಳ್, ಕ್ಷೇತ್ರದ ವಿವಿಧೆಡೆಯಿಂದ ಬಂದಿರುವ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ, ನನಗೇನು ರಿಲ್ಯಾಕ್ಸ್ ಎನ್ನುವುದು ಇಲ್ಲ. ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಿನಂತೆ ಇದ್ದು ಇಂದು ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಮತಗಳ ಕುರಿತು ಮಾಹಿತಿ ಪಡೆದಿದ್ದೇನೆ. ಅಲ್ಲದೆ ಮತ ಎಣಿಕೆ ಕುರಿತು ಸಿದ್ಧಗೊಳಿಸುತ್ತಿದ್ದೇನೆ. ಈ ಬಾರಿಯೂ ಕೊಪ್ಪಳದ ಜನತೆ ಕಳೆದ ಬಾರಿಗಿಂತ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ. ಬಿಜೆಪಿಯೇ ನನಗೆ ನೇರ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಿದ್ದಾರೆ.