ಕೊಪ್ಪಳ:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಡಿಪೋಗೆ ಸೇರಿರುವ ಸಾರಿಗೆ ಬಸ್ವೊಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪೂರ ಬಳಿ ಪಲ್ಟಿಯಾಗಿ ಪ್ರಯಾಣಿಕರು ತೀವ್ರ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಕುಷ್ಟಗಿ ತಾಲೂಕಿನ ದೋಟಿಹಾಳದಿಂದ ದಕ್ಷಿಣ ಕನ್ನಡ ಮಂಗಳೂರು ಮಾರ್ಗದಲ್ಲಿ ಸಂಚರಿಸುವ KA 57 F 4537 ಬಸ್ ಪಲ್ಟಿಯಾಗಿದೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.
ದೋಟಿಹಾಳದಿಂದ ಮೆಣಸಗೇರಿ, ಮಿಯ್ಯಾಪೂರ ಮೂಲಕ ಹನುಮಸಾಗರ ಕಡೆ ಹೊರಟಿದ್ದ ಬಸ್ ಮಿಯ್ಯಾಪೂರ ಹಳ್ಳದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿ ವಾಲಿ ಬಿದ್ದಿದೆ. ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಸುಮಾರು 35 ಜನರಲ್ಲಿ ಹಲವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಕುಷ್ಟಗಿ ಹಾಗೂ ಹನುಮಸಾಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾರಿಗೂ ಜೀವಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಕುಷ್ಟಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಕೆಲ ಗಾಯಾಳುಗಳಿಗೆ ಇಳಕಲ್, ಹನುಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಳೆ ಹೊರಟವರು ಆಸ್ಪತ್ರೆಗೆ ದಾಖಲು: ಮಳೆಯ ಅಭಾವದ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಅಡವಿಭಾವಿ, ಕಡೇಕೊಪ್ಪ, ಮಿಯ್ಯಾಪೂರ, ದೋಟಿಹಾಳ ಭಾಗದಿಂದ ಮಂಗಳೂರು, ಗೋವಾ ಕಡೆಗೆ ಗುಳೆ ಹೊರಟಿರುವ ಪ್ರಯಾಣಿಕರು ಬಸ್ಸಿನಲ್ಲಿ ಹೆಚ್ಚಾಗಿದ್ದರು. ಕೆಲಸ ಅರಸಿ ಹೊರಟವರು ಈ ಘಟನೆಯಿಂದ ಆಸ್ಪತ್ರೆ ಸೇರಿರುವುದು ದುರಂತ ಸಂಗತಿ.
ಕೂಡ್ಲಿಗಿ ಸಮೀಪ ಅಡುಗೆ ಎಣ್ಣೆ ಲಾರಿ ಪಲ್ಟಿ:ಅಡುಗೆ ಎಣ್ಣೆ ಲಾರಿ ಅಪಘಾತಕ್ಕೀಡಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಬಣವಿಕಲ್ಲು ಗ್ರಾಮದ ಬಳಿ ಇಂದು ನಡೆದಿದೆ. ಕೂಡ್ಲಿಗಿ ಮಾರ್ಗವಾಗಿ ಎನ್.ಹೆಚ್ 50ರಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಈ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ಸಂಗ್ರಹಿಸಲು ಜನ ಮುಗಿಬಿದ್ದರು. ಎಣ್ಣೆ ರಸ್ತೆಗೆ ಸೋರಿಕೆಯಾಗುತ್ತಿದ್ದಂತೆ ಸ್ಥಳೀಯರು ಕ್ಯಾನ್, ಕೊಡಗಳನ್ನು ಹಿಡಿದುಕೊಂಡು ಘಟನಾ ಸ್ಥಳಕ್ಕೆ ಧಾವಿಸಿದರು. ತಮಗೆ ಸಿಕ್ಕಷ್ಟು ಎಣ್ಣೆ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಾರ ಪ್ರಮಾಣದ ಅಡುಗೆ ಎಣ್ಣೆ ರಸ್ತೆಯಲ್ಲಿ ಹರಿದು ಹೋಗಿದೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿದರು. ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.
ಇದನ್ನೂಓದಿ:ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು