ಕೊಪ್ಪಳ: ಕಲೆ ಎಲ್ಲರಲ್ಲಿಯೂ ಇದೆ. ಕಲಾಕ್ಷೇತ್ರ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಅದಕ್ಕೆ ಈ ಇಬ್ಬರು ಸಹೋದರರು ನಿದರ್ಶನ. ಇವರ ತಂದೆ ಕೂಡ ಕೊಪ್ಪಳ ನಗರದ ಪ್ರಸಿದ್ಧ ಶಿಲ್ಪ ಕಲಾವಿದ. ಓದಿಗೆ ಗುಡ್ ಬೈ ಹೇಳಿ ತಂದೆಯಂತೆಯೇ ಶಿಲ್ಪಕಲೆಯಲ್ಲಿ ತೊಡಗಿಕೊಂಡಿರುವ ಸಹೋದರರ ಕುರಿತ ವಿಶೇಷ ವರದಿ ಇಲ್ಲಿದೆ.
ಪವನ್ ಶಿಲ್ಪಿ ಹಾಗೂ ಪುನೀತ್ ಶಿಲ್ಪಿ ಸಹೋದರರು. ತಂದೆ ಪ್ರಕಾಶ್ ಶಿಲ್ಪಿ. ಪವನ್ ವ್ಯಾಸಂಗ ಮಾಡಿದ್ದು ಡಿಪ್ಲೋಮಾ ಮೆಕ್ಯಾನಿಕಲ್. ಈತ ಓದು ಮುಂದುವರೆಸಿದ್ದರೆ ಎಂಜಿನಿಯರ್ ಆಗಿರುತ್ತಿದ್ದ. ತಂದೆಯ ಹಾದಿಯಲ್ಲೇ ಸಾಗಬೇಕೆಂಬ ಮಹಾದಾಸೆಯಿಂದ ಓದನ್ನು ಮೊಟಕುಗೊಳಿಸಿ ಶಿಲ್ಪಾ ಕಲಾವಿದನಾಗಿದ್ದಾನೆ. ಪುನೀತ್ ಕೂಡ ತನ್ನ ಸಹೋದರನ ಹಾದಿಯನ್ನೇ ತುಳಿದಿದ್ದಾನೆ.
ಕುಟುಂಬದ ಪರಂಪರೆಯಿಂದ ಬಂದ ಕಲೆಗೆ ಪೂರಕವಾಗಿ ಕಾರ್ಕಳದ ಸಿ.ಇ.ಕಾಮತ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡಿರುವ ಅವರು, ಶಿಲ್ಪಕಲೆ ಹಾಗೂ ಲೋಹ ಶಿಲ್ಪಕಲೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಅದ್ಭುತ ಯುವ ಶಿಲ್ಪ ಕಲಾವಿದರಾಗಿ ರೂಪುಗೊಂಡಿದ್ದಾರೆ. ಪಂಚಲೋಹದ ಕಲೆಯಲ್ಲಿ ಪವನ್ ಮತ್ತು ಶಿಲ್ಪಕಲೆಯಲ್ಲಿ ಪುನೀತ್ ಪ್ರಾವಿಣ್ಯತೆ ಹೊಂದಿದ್ದಾರೆ.
20-22 ವರ್ಷ ವಯಸ್ಸಿನ ಆಸುಪಾಸಿನಲ್ಲಿರುವ ಈ ಕಲಾವಿದರ ಶಿಲ್ಪ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ. ತಂದೆ ಪ್ರಕಾಶ್ ಶಿಲ್ಪಿ ಅವರೊಂದಿಗೆ ಸೇರಿ ತಯಾರಿಸಿರುವ ತುಂಗಭದ್ರಾ ಜಲಾಶಯದ ಶಿಲಾ ಪ್ರತಿಕೃತಿಯು ನಿಜವಾದ ಜಲಾಶಯವೇ ಎನ್ನುವಷ್ಟರ ಮಟ್ಟಿಗೆ ಬೆರಗುಗೊಳಿಸುತ್ತದೆ.
ವಿವಿಧ ಮೂರ್ತಿ, ಆಕೃತಿಗಳು, ಶಿಲ್ಪಗಳು, ಪಂಚಲೋಹದಲ್ಲಿ ದೇವರ ವಿಗ್ರಹಗಳು, ಪ್ರಭಾವಳಿಗಳು ಸೇರಿದಂತೆ ಅನೇಕ ಶಿಲ್ಪಗಳನ್ನು ತಯಾರಿಸುತ್ತಾರೆ. ತಂದೆಯಂತೆ ಶಿಲ್ಪಕಲೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಮಹದಾಸೆ ಹೊಂದಿದ್ದೇವೆ. ಹೀಗಾಗಿ ಓದನ್ನು ಮುಂದವರೆಸಿಲ್ಲ ಎನ್ನುತ್ತಾರೆ ಯುವ ಶಿಲ್ಪ ಕಲಾವಿದ ಪವನ್ ಶಿಲ್ಪಿ.