ಮಂಜುಳಾ ಅವರಿಗೆ ಕೊಪ್ಪಳದಿಂದ ಬಿಜೆಪಿ ಟಿಕೆಟ್ ಕೊಪ್ಪಳ:ಬಿಸಿಲನಾಡು ಕೊಪ್ಪಳದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಭಾರತೀಯ ಜನತಾ ಪಕ್ಷವು ಸಂಸದ ಸಂಗಣ್ಣ ಕರಡಿ ಬದಲು ಅವರ ಸೊಸೆ ಮಂಜುಳಾ ಕರಡಿಗೆ ಟಿಕೆಟ್ ನೀಡಿದೆ. ಈ ಮೂಲಕ ಮಹಿಳಾ ಮತದಾರರೇ ಹೆಚ್ಚಿರುವ ಕೊಪ್ಪಳದಲ್ಲಿ ಏಕೈಕ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಕೊಪ್ಪಳ ಜಿಲ್ಲೆಯಲ್ಲಿರುವ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಅಧಿಕ. ಆದರೂ, ಇಲ್ಲಿಯವರೆಗೂ ಜಿಲ್ಲೆಯಿಂದ ಶಾಸಕರಾಗಿದ್ದು ಒಬ್ಬ ಮಹಿಳೆ ಮಾತ್ರ. ಬಿಜೆಪಿಯಿಂದ ಟಿಕೆಟ್ ಪಡೆದಿರುವ ಮಂಜುಳಾ ಕರಡಿ ಅವರೇನಾದರು ವಿಜಯಶಾಲಿಯಾದರೆ ಕೊಪ್ಪಳದ ಎರಡನೇ ಮಹಿಳಾ ಶಾಸಕಿಯಾಗಲಿದ್ದಾರೆ.
ಸಿಹಿಹಂಚಿ ಸಂಭ್ರಮಿಸಿದ ಮಂಜುಳಾ:ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಂಜುಳಾ ಕರಡಿ ಪಕ್ಷದ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಅತ್ತೆ ನಿಂಗಮ್ಮ ಕರಡಿ ಅವರ ಆಶೀರ್ವಾದ ಪಡೆದರು. "ನನಗೆ ಟಿಕೆಟ್ ಸಿಗುತ್ತೆ ಎನ್ನುವ ನಿರೀಕ್ಷೆ ಇರಲಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ. ಮಹಿಳೆ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಲಾಗಿದೆ. ನಮ್ಮ ಮಾವನವರು ಈ ಭಾಗದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕಾಗಿತ್ತು. ಇದೀಗ ವರಿಷ್ಠರು ನನಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ" ಎಂದ ಮಂಜುಳಾ ಕರಡಿ ಸಂತಸ ಹಂಚಿಕೊಂಡರು.
5,66,341 ಮಹಿಳಾ ಮತದಾರರು:ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 11,28,764 ಮತದಾರರಿದ್ದು, ಈ ಪೈಕಿ 5,62,376 ಪುರುಷ ಮತದಾರರು ಹಾಗೂ 5,66,341 ಮಹಿಳಾ ಮತದಾರರಿದ್ದಾರೆ. ಅಂದರೆ, ಪುರುಷ ಮತದಾರರಿಗಿಂತ ಒಟ್ಟು 3,965 ಮಹಿಳಾ ಮತದಾರರು ಅಧಿಕವಾಗಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗಂಗಾವತಿ, ಕೊಪ್ಪಳ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಅಧಿಕವಾಗಿದ್ದಾರೆ.
ಕ್ಷೇತ್ರವಾರು ಮತದಾರರ ಮಾಹಿತಿ:ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1,25,208 ಪುರುಷ ಮತದಾರರು ಇದ್ದರೆ, 1,27,185 ಮಹಿಳಾ ಮತದಾರರು ಇದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 99,497 ಪುರುಷ ಮತದಾರರಿದ್ದರೆ 1,01,089 ಮಹಿಳಾ ಮತದಾರರು ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,09,744 ಪುರುಷ ಮತದಾರರು ಇದ್ದರೆ, 1,12,583 ಮಹಿಳಾ ಮತದಾರರು ಇದ್ದಾರೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿಯೇ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿದೆ.
ಏಕೈಕ್ ಮಹಿಳಾ ಶಾಸಕಿ:ಅಖಂಡ ರಾಯಚೂರು ಜಿಲ್ಲೆಯಾಗಿದ್ದಾಗ ಪ್ರಥಮ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭೆಯಿಂದ 1952ರಲ್ಲಿ ಲೋಕಸೇವಾ ಸಂಘದಿಂದ ಮಹಾದೇವಮ್ಮ ಸಿರವಾರ ಎಂಬುವವರು ಆಯ್ಕೆಯಾಗಿದ್ದು ಬಿಟ್ಟರೇ ಇಲ್ಲಿಯವರೆಗೂ ಮತ್ತೆ ಯಾರೂ ಆಯ್ಕೆಯಾಗಿಲ್ಲ. ಐದು ವಿಧಾನಸಭಾ ಕ್ಷೇತ್ರದಲ್ಲಿ ಈಗ 16ನೇ ಚುನಾವಣೆ ನಡೆಯುತ್ತಿದೆ. ಇಲ್ಲಿಯವರೆಗೂ ಐದು ಕ್ಷೇತ್ರದಿಂದ ಕೇವಲ 8 ಜನ ಮಾತ್ರ ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ, ಅವರಾರೂ ಆಯ್ಕೆಯಾಗಿಲ್ಲ. ಪ್ರಮುಖ ಪಕ್ಷಗಳು ಸಹ ಮಹಿಳೆಗೆ ಟಿಕೆಟ್ ನೀಡಿದ್ದಿಲ್ಲ. ಈಗ ವಿಧಾನಪರಿಷತ್ಗೆ ಹೇಮಲತಾ ನಾಯಕರನ್ನು ಬಿಜೆಪಿ ನೇಮಕ ಮಾಡಿದೆ. ಮಹಿಳೆಗೆ ಆಡಳಿತ ನಡೆಸಲು ಎಲ್ಲಾ ಅರ್ಹತೆ ಇದೆ. ಆದರೆ ಅವಕಾಶ ಸಿಗಬೇಕೆಂದು ಮಹಿಳಾ ಮುಖಂಡರು ಹೇಳಿದ್ದಾರೆ.
ಮೇಲ್ಮನೆಗೆ ಆಯ್ಕೆಯಾದ ಹೇಮಲತಾ ನಾಯಕ್:ಕೊಪ್ಪಳ ಜಿಲ್ಲೆಯಿಂದ ಮೊದಲ ಮಹಿಳಾ ವಿಧಾನ ಪರಿಷತ್ ಸದಸ್ಯೆಯಾಗಿ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತೆ ಕೊಪ್ಪಳದ ಹೇಮಲತಾ ನಾಯಕ ಆಯ್ಕೆಯಾಗಿದ್ದು ವಿಶೇಷವಾಗಿದೆ. ಆದರೆ, ಇದು ಜನರಿಂದ ಆಯ್ಕೆಯಾಗುವ ಪ್ರಕ್ರಿಯೆ ಇಲ್ಲವಾದ್ದರಿಂದ ಮಹಿಳೆಯರಿಗೆ ನೇರವಾಗಿ ಚುನಾವಣೆಗೆ ಸ್ಪರ್ಧಿಸಿ, ಆಯ್ಕೆಯಾಗುವಂತ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:3ನೇ ಪಟ್ಟಿಯಲ್ಲಿ 3 ಕುಟುಂಬಕ್ಕೆ ಬಿಜೆಪಿ ಟಿಕೆಟ್: ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿಗೆ ಛಾನ್ಸ್