ಗಂಗಾವತಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದು, ಅವರನ್ನು ಸಿಎಂ ಪದವಿಯಿಂದ ಕೆಳಗಿಸುವ ಯಾವುದೇ ನಿರ್ಧಾರವನ್ನು ಪಕ್ಷವಾಗಲಿ, ಹೈಕಮಾಂಡ್ ಆಗಲಿ ಕೈಗೊಂಡಿಲ್ಲ. ಇದೆಲ್ಲಾ ಕೇವಲ ಕಪೋಲಕಲ್ಪಿತ ಸುದ್ದಿಗಳು ಮಾತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಗಂಗಾವತಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಕೈಗೊಳ್ಳುವ ಪ್ರತಿ ಅಭಿವೃದ್ಧಿ ವಿಚಾರಗಳು ಕಾಂಗ್ರೆಸ್ಸಿಗರಿಗೆ ಸರಿಕಾಣಿಸದು. ಅವರ ಕಣ್ಣಿಗೆ ಕೇವಲ ಅಲ್ಪಸಂಖ್ಯಾತರು ಮಾತ್ರ ಕಾಣಿಸುತ್ತಾರೆ. ಅವರನ್ನು ಮಾತ್ರ ಓಲೈಸುತ್ತಾರೆ. ಆದರೆ ಎಂದಿಗೂ ಹಿಂದುಗಳ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಚಿಂತನೆ ಮಾಡಿಲ್ಲ. ಈ ಬಗ್ಗೆ ಆಲೋಚನೆ ಮಾಡಿದ್ದು ಬಿಜೆಪಿ ಮಾತ್ರ ಎಂದರು.
ಪ್ರವಾಸಿಗರ ದೃಷ್ಟಿಯಿಂದ ಅಂಜನಾದ್ರಿ ಬೆಟ್ಟ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಾಕಷ್ಟು ಅನುದಾನ ನೀಡುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡನ ಹೊಟೇಲ್ನಲ್ಲಿ ಟೀ ಸವಿದ ವಿಜಯೇಂದ್ರ:
ಬಿ.ವೈ.ವಿಜಯೇಂದ್ರ ಇಲ್ಲಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಸಹೋದರನ ಒಡೆತನದಲ್ಲಿರುವ ಹೊಟೇಲ್ನಲ್ಲಿ ಚಹಾ ಸೇವಿಸುವ ಮೂಲಕ ಗಮನ ಸೆಳೆದರು. ಸಿಂಧನೂರಿನಲ್ಲಿ ಆಪ್ತ ಬೆಂಬಲಿಗರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಿಜಯೇಂದ್ರ, ವಾಪಸ್ ಬೆಂಗಳೂರಿಗೆ ಹೋಗುವ ಮುನ್ನ ಗಂಗಾವತಿ ಮೂಲಕ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ನಗರದಲ್ಲಿ ಕೆಲಕ್ಷಣ ತಮ್ಮ ಬೆಂಬಲಿಗರೊಂದಿಗೆ ಸಮಯ ಕಳೆದರು.
ಇದಕ್ಕೂ ಮುನ್ನ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಹೊಂದಿಕೊಂಡಿರುವ ಅವರ ಸಹೋದರ ಅಖ್ತರ್ ಅನ್ಸಾರಿ ಅವರ ಒಡೆತನದಲ್ಲಿರುವ ಕೊಪ್ಪಳ ರಸ್ತೆಯಲ್ಲಿರುವ ಐಸ್ಲ್ಯಾಂಡ್ನಲ್ಲಿ ಟೀ ಸೇವಿಸಿದರು. ಗಂಗಾವತಿಯ ಬಹುತೇಕ ಬಿಜೆಪಿಗರು ಅಖ್ತರ್ ಅನ್ಸಾರಿ ಒಡೆತನದ ಐಸ್ಲ್ಯಾಂಡ್ನಲ್ಲಿ ಚಹಾ, ಉಪಹಾರ, ಊಟ ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ ವಿಜಯೇಂದ್ರ ಮಾತ್ರ ಇದೇ ಹೊಟೇಲ್ನಲ್ಲಿ ಚಹಾ ಸೇವಿಸಿದ್ದು ವಿಶೇಷವಾಗಿತ್ತು.