ಕೊಪ್ಪಳ: ಬಿಜೆಪಿಯಲ್ಲಿನ ಭಿನ್ನಮತ ಕುರಿತಂತೆ ಜಿಲ್ಲೆಯ ಕಾರಟಗಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರು ಒಂದೆಡೆ ಸೇರಿ ಊಟ ಮಾಡಿದರೆ ಭಿನ್ನಮತವಾ ಎಂದು ಪ್ರಶ್ನಿಸಿದ್ದಾರೆ.
ಶಾಸಕರು ಒಂದೆಡೆ ಸೇರಿ ಚಹಾ ಕುಡಿದರೆ, ಊಟ ಮಾಡಿದರೆ ಅದು ಭಿನ್ನಮತವಾ? ಇದನ್ನು ಭಿನ್ನಮತವೆಂದು ತಿಳಿದುಕೊಂಡರೆ ನಾನೇನು ಮಾಡೋಕೆ ಆಗುತ್ತೆ. ಅಭಿವೃದ್ಧಿ ದೃಷ್ಟಿಯಿಂದ ಸೇರಿದ್ದೇವೆ. ಊಟ ಮಾಡಲು ಸೇರಿದ್ದೇವೆ ಎಂದು ಈಗಾಗಲೇ ಅವರೇ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಶಾಸಕ ಉಮೇಶ್ ಕತ್ತಿ ನಮ್ಮ ಜೊತೆಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇನ್ನು ರಾಜ್ಯದಲ್ಲಿ ಈಗ ಇಬ್ಬರು ಸಿಎಂ ಇದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ಸಿದ್ದರಾಮಣ್ಣ (ಸಿದ್ದರಾಮಯ್ಯ) ಗೊಂದಲ ಸೃಷ್ಟಿಸುವುದರಲ್ಲಿ ನಂಬರ್ ಒನ್. ಅವರು ಮುಖ್ಯಮಂತ್ರಿಯಾಗಿದ್ದಾಗ ಬೇರೆ ಕೈಗಳು ಕೆಲಸ ಮಾಡಿದ್ದಾವೋ ಇಲ್ಲವೋ ಗೊತ್ತಿಲ್ಲ. ಆದರೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ, ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಇಳಿಸುವ ಕೆಲಸ ಮಾಡಿದರು. ನಮ್ಮ ಪಾರ್ಟಿಯಲ್ಲಿ ಏಕೈಕ ನಾಯಕ ಅದು ಯಡಿಯೂರಪ್ಪ. ಈಗ ಅವರೊಬ್ಬರೇ ಮುಖ್ಯಮಂತ್ರಿ ಎಂದು ತಿರುಗೇಟು ನೀಡಿದರು.
130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ಅನನ್ಯ. ದೇಶದ ಹಿತದೃಷ್ಟಿಯಿಂದ ಲಾಕ್ಡೌನ್ಅನ್ನು ಹಾಗೆಯೇ ಮುಂದುವರೆಸಲು ಬರುವುದಿಲ್ಲ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ವರದಿ, ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಮರಣ ಪ್ರಮಾಣ ಕಡಿಮೆ ಇದೆ. ಇದೆಲ್ಲವನ್ನು ಗಮನಿಸಿ ಪ್ರಧಾನಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಸಂತಾಪ: ರಾಜ್ಯದ ಒಬ್ಬ ಅದ್ಭುತ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಸರ್ಜಾರ ಇಡೀ ಕುಟುಂಬ ಚಲನಚಿತ್ರಕ್ಕೆ ಅರ್ಪಿಸಿಕೊಂಡಿದೆ. ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕಾದ ಪ್ರತಿಭೆಯನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ. ಚಿತ್ರರಂಗಕ್ಕಂತೂ ಇದು ದೊಡ್ಡ ಆಘಾತ. ಸಣ್ಣ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡಿರೋದಕ್ಕೆ ತುಂಬಾ ದುಃಖವಾಗ್ತಿದೆ. ಅವರ ಕುಟುಂಬ ದುಃಖದಲ್ಲಿ ಮುಳುಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದರು.