ಗಂಗಾವತಿ: ಬಿಜೆಪಿಗರಿಗೆ ಸೂಕ್ಷ್ಮ ವಿಚಾರಗಳಲ್ಲಿ ದಿಕ್ಕು ತಪ್ಪಿಸಲು ಹಿಂದುಗಳು ಬೇಕು. ಆದರೆ, ಧ್ವಂಸಗೊಂಡ, ಭಗ್ನಗೊಂಡು ಪಂಪಾ ಸರೋವರದಂತಹ ದೇವಾಲಯಗಳ ವಿಚಾರ ಅವರಿಗೆ ಬೇಕಾಗಿಲ್ಲ ಎಂದು ಜಿಲ್ಲಾ ಡಿಸಿಸಿ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ಕಾಂಗ್ರೆಸ್ ನಿಯೋಗದೊಂದಿಗೆ ಪಂಪಾಸರೋವರಕ್ಕೆ ಭೇಟಿ ನೀಡಿದ ಅವರು, ಕೇವಲ ಒಂದು ದಿನದ ಹಿಂದಷ್ಟೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಗಂಗಾವತಿಗೆ ಭೇಟಿ ನೀಡಿ ತೆರಳಿದ್ದಾರೆ. ಆದರೆ, ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸುವ ಸೌಜನ್ಯ ತೋರಿಲ್ಲ ಎಂದು ಹೇಳಿದ್ದಾರೆ.
ಕೇವಲ 10 ಕಿಲೋಮೀಟರ್ ಅಂತರದಲ್ಲಿರುವ ಗಂಗಾವತಿಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಭೇಟಿ ನೀಡಿದ್ದಾರೆ. ಆದರೆ, ಇಲ್ಲಿಗೆ ಭೇಟಿ ನೀಡಿಲ್ಲ. ಇವರಿಗೆ ಮತಗಳಿಗಾಗಿ ಹಿಂದುಗಳು ಬೇಕು. ಆದರೆ, ಹಿಂದುಗಳ ದೇವಾಲಯ ಬೇಕಿಲ್ಲ. ಇವರೆಲ್ಲಾ ಡೋಂಗಿ ಹಿಂದುವಾದಿಗಳು ಎಂದು ಕಿಡಿಕಾರಿದ್ದಾರೆ.
ಬಿಜೆಪಿಗರಿಗೆ ದಿಕ್ಕುತಪ್ಪಿಸಲು ಹಿಂದುಗಳು ಬೇಕು, ದೇವಾಲಯಗಳು ಬೇಡವೇ ಎಂದು ಮಾಜಿ ಶಿವರಾಜ ತಂಗಡಗಿ ಪ್ರಶ್ನಿಸಿರುವುದು.. ಸಚಿವ ಶ್ರೀರಾಮುಲು ವಿಚಾರವಾಗಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆ ಮಾಡಿ ಅಧಿಕೃತ ಹೇಳಿಕೆ ನೀಡಬೇಕು. ಈ ಬಗ್ಗೆ ಸಚಿವ ಶ್ರೀರಾಮುಲು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸ್ಪಷ್ಟನೆ ನೀಡಬೇಕು ಎಂದು ತಂಗಡಗಿ ಒತ್ತಾಯಿಸಿದರು. ಅಭಿವೃದ್ಧಿಯ ಹೆಸರಲ್ಲಿ ದೇಗುಲಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಅಂದರೆ ವಜ್ರ ವೈಢೂರ್ಯಗಳನ್ನು ದೋಚುವ ಕೆಲಸ ಆಗ್ತಾ ಇದೆ. ಇದನ್ನು ಯಾರು ಮಾಡ್ತಾ ಇದಾರೆ ಎಂದು ತನಿಖೆ ನಡೆಸಬೇಕು. ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಗಮನ ವಹಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಮಂತ್ರಿ, ರಾಜ್ಯದ ಮುಖ್ಯಮಂತ್ರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂದೇಹ ವ್ಯಕ್ತವಾಗುತ್ತಿದೆ ಎಂದು ಶಿವರಾಜ ತಂಗಡಗಿ ಆರೋಪಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬೈಯಾಪುರ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಆನೆಗೊಂದಿ ರಾಜವಂಶಸ್ತೆ ಲಲಿತಾರಾಣಿ ರಂಗದೇವರಾಯಲು ಮತ್ತಿತರರು ಉಪಸ್ಥಿತರಿದ್ದರು.
ಓದಿ :ಜ್ವರಕ್ಕೆ ಚಿಕಿತ್ಸೆ ಪಡೆಯಲು ತೆರಳಿದ ನವ ವಿವಾಹಿತೆಯ ದುರಂತ ಅಂತ್ಯ: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ