ಗಂಗಾವತಿ: ಇಡೀ ರಾಷ್ಟ್ರದ ಬಗ್ಗೆ ಕಳಕಳಿ ಹೊಂದಿರುವ ಏಕೈಕ ನಾಯಕ ಎಂದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಬಾಯ್ತಪ್ಪಿ ಮಾಡಿರುವ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ಸಂದ ಹಿನ್ನೆಲೆ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ 'ಮಹಾ ಸಂಪರ್ಕ' ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರದ 9 ವರ್ಷದ ಸಾಧನೆಗಳನ್ನು ಬಿಂಬಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಬಜೆಟ್ ಘೋಷಣೆ ಮಾಡುತ್ತಿದ್ದ ಸಿದ್ದರಾಮಯ್ಯ ಭಾಷಣ ಬಿಟ್ಟು ಕೇಂದ್ರದ ವಿರುದ್ಧ ಟೀಕೆ ಮಾಡಿದರು ಎಂದು ಅವರು ದೂರಿದರು.
ಮುಂದುವರೆದು ಮಾತನಾಡಿದ ಸಂಸದ ಕರಡಿ ಸಂಗಣ್ಣ "ಇಡೀ ರಾಷ್ಟ್ರದ ಬಗ್ಗೆ ಕಳಕಳಿ ಹೊಂದಿರುವ ನಾಯಕ ಎಂದರೆ ಸಿದ್ದರಾಮಯ್ಯ ಎಂದು ನಾವು ಕರೆಯಬೇಕಾಗಿದೆ. ಇಂತಹವರಿಗೆ ಪಾಠ ಕಲಿಸಬೇಕಾದರೆ ಮತ್ತೆ ನೇರಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಸಾರ್ವಜನಿಕ ವೇದಿಕೆಯಲ್ಲಿ ಸಂಸದ ಕರಡಿ ಸಂಗಣ್ಣ ಭಾಷಣ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯ್ತಪ್ಪಿ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ. ಈ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮೋದಿಯಂತ ನಾಯಕನ್ನು ಕಳೆದುಕೊಂಡರೆ ಸಂಕಷ್ಟ: ಕೇವಲ 9 ವರ್ಷದಲ್ಲಿ ಭಾರತ ದೇಶವನ್ನು ಶಕ್ತಿಶಾಲಿ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ಮತ್ತು ಆರ್ಥಿಕವಾಗಿ ಬಲಿಷ್ಠವಾಗುವಂತೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯಂತ ಉನ್ನತ ನಾಯಕನನ್ನು ಕಳೆದುಕೊಂಡರೆ ದೇಶಕ್ಕೆ ನಷ್ಟ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.