ಕೆ.ಆರ್.ಪುರ/ಕೊಪ್ಪಳ/ದಾವಣಗೆರೆ:ಕೊರೊನಾ ಏರಿಕೆಯಾಗುತ್ತಿರುವ ಮಧ್ಯೆಯೇ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ನಡೆಸುತ್ತಿರುವುದರ ವಿರುದ್ಧ ಬಿಜೆಪಿ ನಾಯಕರು, ಸಚಿವರು ಮುಗಿಬಿದ್ದಿದ್ದಾರೆ. ಪಾದಯಾತ್ರೆಯಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದರ ಬಗ್ಗೆಯೂ ಟೀಕಿಸಿದ್ದಾರೆ.
ಯೋಜನೆ ಸ್ಥಗಿತವಾದರೆ ಕಾಂಗ್ರೆಸ್ ಕಾರಣ: ಸಚಿವ ಬೈರತಿ
ಮೇಕೆದಾಟು ಯೋಜನೆ ವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಿದೆ. ದ್ವಂದ್ವ ನಿಲುವಿನ ಕಾಂಗ್ರೆಸ್ ಪಾದಯಾತ್ರೆ ಮಾಡಲು ಬೀದಿಗಿಳಿದಿರುವುದರಿಂದ ಇನ್ನಷ್ಟು ಕ್ಲಿಷ್ಟಕರವಾಗಲಿದೆ. ಮೇಕೆದಾಟು ಯೋಜನೆ ಸ್ಥಗಿತವಾದರೆ, ಅದಕ್ಕೆ ಕಾಂಗ್ರೆಸ್ಸೇ ನೇರ ಹೊಣೆಯಾಗಲಿದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೋಸ್ಕರ ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನು ಇನ್ನಷ್ಟು ಜಟಿಲಗೊಳಿಸಿದೆ ಎಂದು ಹರಿಹಾಯ್ದರು.
ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಯೋಜನೆಯ ಸಮಸ್ಯೆ ಏನು ಎಂದು ಗೊತ್ತಿದೆ. ಎಲ್ಲಾ ಗೊತ್ತಿದ್ದೂ, ಈ ರೀತಿಯ ಕೆಲಸ ಮಾಡುವುದು ಸರಿಯಲ್ಲ ಎಂದರು.
ರಾಜಕೀಯಕ್ಕಾಗಿ ಪಾದಯಾತ್ರೆ: ಸಚಿವ ಆಚಾರ್
ಜನರಿಗಾಗಿ ರಾಜಕಾರಣ ಮಾಡಬೇಕು, ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ನವರು ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಟೀಕಿಸಿದ್ದಾರೆ.