ಕೊಪ್ಪಳ: ಬಿಜೆಪಿಯವರಿಗೆ ಸದ್ಯ ಉಳಿದಿರುವುದು ಐಟಿ, ಇಡಿ, ಸಿಬಿಐ. ಅದು ಬಿಟ್ರೆ ಬೇರೇನೂ ಇಲ್ಲ. ಇವುಗಳನ್ನೇ ಬಳಸಿಕೊಂಡು ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ದೂರಿದರು. ಕೊಪ್ಪಳದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರ ಮನೆ ಮೇಲೆ ದಾಳಿಯಾಗುತ್ತಿಲ್ಲ. ಯಾಕೆ ಬಿಜೆಪಿಯವರ ಮನೆಯಲ್ಲಿ ಏನೂ ಇಲ್ಲವೇ? ಹಿಂದಿನ ಸರ್ಕಾರದಲ್ಲಿ ಅವರು ಏನೇನೆಲ್ಲಾ ತಿಂದಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಎಎಪಿ, ಕರ್ನಾಟಕದಲ್ಲಿ ಕಾಂಗ್ರೆಸ್, ಆಂಧ್ರದಲ್ಲಿ ಅವರಿಗೆ ಚಂದ್ರಬಾಬು ನಾಯ್ಡು ಮಾತ್ರ ಕಾಣುತ್ತಾರೆ. ಇನ್ನುಳಿದ ಬಿಜೆಪಿ ನಾಯಕರು ಯಾರೂ ಐಟಿ, ಇಡಿಯವರಿಗೆ ಕಾಣಿಸುತ್ತಿಲ್ಲ. ಬಿಜೆಪಿಯವರ ಮನೆ ಮೇಲೆ ಯಾಕೆ ದಾಳಿ ಆಗೋದಿಲ್ಲ ಎಂದು ಪ್ರಶ್ನಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಕಾಂಗ್ರೆಸ್ ಎಟಿಎಂ ಸರ್ಕಾರ ಅನ್ನೋದಕ್ಕೆ ಬಿಜೆಪಿಯವರು ಪ್ರೂಫ್ ನೀಡಲಿ. ನಾವು ಅವರ ಮೇಲೆ ದಾಖಲೆಸಮೇತ ಆಪಾದನೆ ಮಾಡಿದ್ದೇವೆ. ನಮ್ಮ ತಪ್ಪಿದ್ದರೆ ಹೇಳಲಿ, ತಿದ್ದಿಕೊಳ್ಳುತ್ತೇವೆ ಎಂದರು. ಸರ್ಕಾರಕ್ಕೆ ಟ್ಯಾಕ್ಸ್ ವಂಚನೆ ಮಾಡುವವರ ಮೇಲೆ ಐಟಿ ದಾಳಿಯಾಗಲಿ. 42 ಕೋಟಿ ರೂ ಸಿಕ್ಕಿರೋದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು.