ನಮ್ಮ ಯೋಜನೆ ವಿರೋಧಿಸಿದವರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಸಿಎಂ ಸಿದ್ದರಾಮಯ್ಯ ಕೊಪ್ಪಳ:''ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವಿರೋಧಿಸಿದವರೇ, ಇಂದು ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಗ್ಯಾರಂಟಿ ನೀಡಲು ಮುಂದಾಗಿರುವುದು ವಿಪರ್ಯಾಸ'' ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಬಿಜೆಪಿಯವರು ನುಡಿದಂತೆ ನಡೆಯದವರು. ನಾವು ಯಾವುದೇ ಯೋಜನೆ ಮಾಡಿದರೆ ರಾಜ್ಯ, ದೇಶ ದಿವಾಳಿಯಾಗುತ್ತದೆ. ಅದೇ ಬಿಜೆಪಿಯವರು ಮಾಡಿದರೆ, ಅದು ಹೇಗೆ ಉದ್ಧಾರ ಮಾಡುವ ಕೆಲಸವಾಗುತ್ತದೆ'' ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಪ್ರತ್ರಿಕ್ರಿಯಿಸಿದ ಸಿಎಂ, ''ವಿದ್ಯುತ್ ಕದ್ದಿರುವ ಹೆಚ್ ಡಿ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಅವರೇ ಸ್ವತಃ ದಂಡ ಕಟ್ಟಿದ್ದಾರೆ. ಇದರ ಮೇಲೆ ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ಯತೀಂದ್ರ ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ರಾ? ಎಂದು ಪ್ರಶ್ನಿಸಿದ ಸಿಎಂ, ಕುಮಾರಸ್ವಾಮಿ ಸಿಎಂ ಇದ್ದಾಗ ವರ್ಗಾವಣೆ ಮಾಡಿ ದುಡ್ಡು ಮಾಡಿರೋದು ಇಡೀ ಜಗತ್ತಿಗೆ ಗೊತ್ತಿದೆ. ಈಗ ಸಾಚಾತನ ತೋರಿಸಲು ಬಂದರೆ ಯಾರು ಕೇಳುವುದಿಲ್ಲ'' ಎಂದು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆ ಗೂಂಡಾಗಿರಿ ಜೋರಾಗಿದೆ: ರಾಜೀನಾಮೆಗೆ ಒತ್ತಾಯಿಸಿದ ಬಿ ವೈ ವಿಜಯೇಂದ್ರ