ಕುಷ್ಟಗಿ (ಕೊಪ್ಪಳ):ಇಲ್ಲಿನ ಪುರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ನಿಗದಿಯಾಗಿರುವ ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಅಲ್ಪಸಂಖ್ಯಾತ ವರ್ಗದ ಸದಸ್ಯೆಯನ್ನು ನಿಯೋಜಿಸಬೇಕೆಂಬ ಪ್ರಸ್ತಾಪ ಬಿಜೆಪಿ ಹೈಕಮಾಂಡ್ ಮುಂದಿದೆ.
ಅ.27ಕ್ಕೆ ಅಧ್ಯಕ್ಷ -ಉಪಾಧ್ಯಕ್ಷೆ ಆಯ್ಕೆಗೆ ಚುನಾವಣಾ ದಿನಾಂಕ ಪುನರ್ ನಿಗದಿಯಾಗಿದ್ದು, ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ 21 ನೇವಾರ್ಡ್ ಸದಸ್ಯ ಗಂಗಾಧರಸ್ವಾಮಿ ಹಿರೇಮಠ ಹೆಸರು ಅಂತಿಮಗೊಳಿಸಿದೆ. ಇನ್ನೂ ಅರ್ಹ ಉಪಾಧ್ಯಕ್ಷೆ ಸ್ಥಾನ ಅಂತಿಮಗೊಳಿಸಿಲ್ಲ.
ಸದ್ಯ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಪೂರಕ ವಾತಾವರಣವನ್ನು ನಿರ್ಮಿಸಲು ಮುಂದಾಗಿದೆ. ಹೀಗಾಗಿ, ಉಪಾಧ್ಯಕ್ಷೆ ಸ್ಥಾನವನ್ನು 12ನೇ ವಾರ್ಡ್ ಸದಸ್ಯೆ ನಾಹೀನ ಅಮೀನುದ್ದೀನ್ ಮುಲ್ಲಾ ಅವರಿಗೆ ನೀಡಬೇಕೆಂದು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕರು ಆಗಿರುವ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ ಅವರಿಗೆ ಜಿಲ್ಲಾ ಬಿಜೆಪಿಗೆ ಮನವಿ ಸಲ್ಲಿಸಿದ್ದು, ಉಪಾಧ್ಯಕ್ಷೆ ಸ್ಥಾನ ನಾಹೀನ ಅಮೀನುದ್ದೀನ ಮುಲ್ಲಾ ಅವರಿಗೆ ವಹಿಸಬೇಕೆಂದು ಬಿಜೆಪಿ ಅಲ್ಪಸಂಖ್ಯಾತ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಹುಸೇನ್ ಪಟ್ಟೇದಾರ ಅವರು ಒತ್ತಾಯಿಸಿದ್ದಾರೆ. ಆದರೆ, ಸ್ಥಳೀಯ ಬಿಜೆಪಿ ಮತ್ತು ಹೈಕಮಾಂಡ್ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಎಂದಷ್ಟೇ ಹೇಳಿದೆ.