ಗಂಗಾವತಿ (ಕೊಪ್ಪಳ) :ವಿಧಾನಸಭಾ ಚುನಾವಣೆಯ ಕಾವು ಮೆಲ್ಲಗೆ ಏರುತ್ತಿರುವ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಸ್ಪರ್ಧೆಯಿಂದಾಗಿ ಇದೀಗ ರಾಜ್ಯ ರಾಜಕೀಯದ ಗಮನ ಸೆಳೆದಿರುವ ಗಂಗಾವತಿಯಲ್ಲಿ ಬಿಜೆಪಿ ಮತ್ತು ಕೆಆರ್ಪಿ ಮಧ್ಯೆ ಭಾರಿ ಪೈಪೋಟಿ ಕಂಡುರುತ್ತಿದೆ. ಜೆಡಿಎಸ್ ಇನ್ನೂ ಅಭ್ಯರ್ಥಿಯನ್ನು ಈ ಕ್ಷೇತ್ರಕ್ಕೆ ಅಂತಿಮ ಮಾಡಿಲ್ಲ. ಜೊತೆಗೆ ಪ್ರಚಾರದಿಂದಲೂ ದೂರವೇ ಉಳಿದಿದೆ. ಇತ್ತ ಕಾಂಗ್ರೆಸ್ನಲ್ಲಿ ಟಿಕೆಟ್ ಗೊಂದಲ ಮುಂದುವರೆದಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮಗೇ ಟಿಕೆಟ್ ದೊರೆಯಲಿದೆ ಎಂಬ ವಿಶ್ವಾಸದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಪರಣ್ಣ ಮುನವಳ್ಳಿ ಮತ್ತು ಕೆಆರ್ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜನಾರ್ದನರೆಡ್ಡಿ ಮಧ್ಯ ಪೈಪೋಟಿ ಕಂಡು ಬರುತ್ತಿದೆ. ರೆಡ್ಡಿ ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ದೊಡ್ಡಮಟ್ಟದಲ್ಲಿ ಪಕ್ಷದ ಪ್ರಚಾರ ನಡೆಸಿ ಗಮನ ಸೆಳೆದಿದ್ದರು. ಒಂದೇ ದಿನದಲ್ಲಿ ನಗರದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಗಮನ ಸೆಳೆಯಲು ಯತ್ನಿಸಿದ್ದರು. ಅಲ್ಲದೇ ನಾಲ್ಕು ಕಾರ್ಯಕ್ರಮ ಆಯೋಜಿಸಿ ನೂರಾರು ಜನ ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.
ಇದೀಗ ರೆಡ್ಡಿಗೆ ಸೆಡ್ಡು ಹೊಡೆಯುವಂತೆ ಬಿಜೆಪಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ 20 ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಭೇಟಿ ನೀಡಿ ಹೋದ ಬೆನ್ನಲ್ಲೇ, ಸಿಎಂ ಆಗಮಿಸಿ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅದರ ಬೆನ್ನಲ್ಲೇ ಮಂಗಳವಾರ ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ನಗರಕ್ಕೆ ಆಗಮಿಸಿ ಯುವ ಮೋರ್ಚಾ ಕೊಪ್ಪಳ ಜಿಲ್ಲಾಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿಯತ್ತ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.