ಕೊಪ್ಪಳ: ಕೊಪ್ಪಳದಲ್ಲಿ ಬಡವರಿಗೆ ಸೂರು ಕಲ್ಪಿಸುವ ಸರ್ಕಾರದ ಯೋಜನೆಯೊಂದು 6 ವರ್ಷವಾದರೂ ಫಲಾನುಭವಿಗಳಿಗೆ ತಲುಪಿಲ್ಲ. ಹೀಗಾಗಿ ಅಂದು ಅರ್ಜಿ ಹಾಕಿ ತಮ್ಮ ಪಾಲಿನ ಹಣವನ್ನು ಪಾವತಿಸಿರುವ ಫಲಾನುಭವಿಗಳು ನಮಗೆ ಮನೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.
ನಗರದ ಪ್ರದೇಶದಲ್ಲಿನ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ 2012-13 ನೇ ಸಾಲಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ 2,000 ಗುಂಪು ಮನೆಗಳ ನಿರ್ಮಾಣಕ್ಕೆ ಕಾರ್ಯ ಪ್ರಾರಂಭವಾಯಿತು. ಅಂದಿನ ಹಾಗೂ ಇಂದಿನ ವಸತಿ ಸಚಿವ ವಿ. ಸೋಮಣ್ಣ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು.
ತಗುಲುವ ವೆಚ್ಚವೆಷ್ಟು?
ಒಟ್ಟು 2.10 ಲಕ್ಷ ರೂಪಾಯಿ ವೆಚ್ಚದ ಮನೆಗಳ ನಿರ್ಮಾಣದ ಯೋಜನೆ ಇದು. ಈ ಪೈಕಿ ಫಲಾನುಭವಿಗಳು 30 ಸಾವಿರ ರೂಪಾಯಿ, ಬ್ಯಾಂಕುಗಳಿಂದ ಒಂದು ಲಕ್ಷ ರೂಪಾಯಿ ಸಾಲ ಹಾಗೂ 80 ಸಾವಿರ ರೂಪಾಯಿ ಸರ್ಕಾರದ ಸಹಾಯಧನ ಒಳಗೊಂಡಿದೆ.
ಈವರೆಗೂ ನಿರ್ಮಾಣವಾಗದ ಮನೆಗಳು:
ಮನೆಗಳು ಬೇಕು ಎಂದು 2,000 ಜನರು ಅರ್ಜಿ ಹಾಕಿದ್ದರು. ಇದರಲ್ಲಿ 1,030 ಜನರು ನಗರಸಭೆಗೆ ತಮ್ಮ ಪಾಲಿನ ವಂತಿಗೆ ಹಣ 30 ಸಾವಿರ ರೂಪಾಯಿಯನ್ನು ಬ್ಯಾಂಕಿನ ಮೂಲಕ ಪಾವತಿಸಿದ್ದಾರೆ. ಬ್ಯಾಂಕಿನ ಮೂಲಕ ನಗರಸಭೆಗೆ ಹಣ ಪಾವತಿಸಿದವರಿಗೆ ನಗರಸಭೆಯಿಂದ ಹಕ್ಕುಪತ್ರ ನೀಡಿಲಾಗಿದೆ. ಆದರೆ ಮನೆಗಳನ್ನು ಈವರೆಗೂ ನಿರ್ಮಿಸಿಕೊಟ್ಟಿಲ್ಲ. ಇದರಿಂದಾಗಿ ಕಳೆದ ಆರು ವರ್ಷದಿಂದ ಫಲಾನುಭವಿಗಳು ತಮ್ಮ ಸೂರಿಗಾಗಿ ಎದುರು ನೋಡುತ್ತಿದ್ದಾರೆ.
ನಿರ್ಮಾಣವಾಗಿದ್ದು ಕೇವಲ 231 ಮನೆಗಳು:
ನಗರದಿಂದ ಅನತಿ ದೂರದಲ್ಲಿರುವ ಚಿಕ್ಕಸಿಂದೋಗಿ ಹಾಗೂ ಹೂವಿನಾಳ ಬಳಿ 2,000 ಮನೆಗಳನ್ನು ನಿರ್ಮಿಸಲು ಒಟ್ಟು 88 ಎಕರೆ ಭೂಮಿ ಖರೀದಿಸಲಾಗಿದೆ. ಮನೆಗಳ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ 13 ಕೋಟಿ ರೂಪಾಯಿ ಸಂದಾಯ ಮಾಡಲಾಗಿದೆ. ಈ ಹಣದಲ್ಲಿ ಈಗಾಗಲೇ 231 ಮನೆಗಳನ್ನು ನಿರ್ಮಿಸಲಾಗಿದ್ದು, ಉಳಿದ ಮನೆಗಳು ನಿರ್ಮಾಣವಾಗಿಲ್ಲ.
ನಗರಸಭೆ ವಿರುದ್ಧ ಅಸಮಾಧಾನ:
ಆಗ ನಗರಸಭೆಯು ಮಧ್ಯಸ್ತಿಕೆ ವಹಿಸಿ ಹಣ ಪಾವತಿಸಿದ ಫಲಾನುಭವಿಗಳಿಗೆ ಬ್ಯಾಂಕುಗಳ ಮೂಲಕ ಸಾಲ ನೀಡಿದ್ದರೆ ಅಂದೇ ಫಲಾನುಭವಿಗಳಿಗೆ ಮನೆಗಳು ಸಿಗುತ್ತಿದ್ದವು. ನಗರಸಭೆಯ ವಿಳಂಬ ಧೋರಣೆಯಿಂದ ಬ್ಯಾಂಕುಗಳು ಸಾಲ ನೀಡಲು ಮುಂದೆ ಬರಲಿಲ್ಲ. ಹೀಗಾಗಿ ಸರ್ಕಾರದಿಂದ ಪ್ರತಿ ಫಲಾನುಭವಿಗಳಿಗೆ ಸಿಗಬೇಕಾದ 80 ಸಾವಿರ ರೂಪಾಯಿ ಸಹಾಯಧನದ ಹಣವೂ ಸಿಕ್ಕಿಲ್ಲ. ಇದರಿಂದಾಗಿ ಫಲಾನುಭವಿಗಳು ನಗರಸಭೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:Watch Video: ಕಾರು, ಬೈಕ್ ಹಾಗೂ ಆಟೋ ನಡುವೆ ಡಿಕ್ಕಿ: ನಾಲ್ವರಿಗೆ ಗಾಯ
ಹಣ ಪಾವತಿಸಿದ ಫಲಾನುಭವಿಗಳಿಗೆ ಈಗಿರುವ ಮನೆಗಳನ್ನು ಹಾಗೂ ನಿವೇಶನಗಳನ್ನು ಈಗಿರುವ ಸ್ಥಿತಿಯಲ್ಲಿ ಹಂಚಿಕೆ ಮಾಡಲು ನಗರಸಭೆ ಹಾಗೂ ಜಿಲ್ಲಾಡಳಿತ ಚಿಂತನೆ ನಡೆಸಿವೆ. ಮನೆಗಳಿಗಾಗಿ ಅರ್ಜಿ ಹಾಕಿ ಹಣ ಪಾವತಿಸದೇ ಇದ್ದವರು ಹಣ ಪಾವತಿಸಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಅರ್ಜಿ ಸಲ್ಲಿಸಿದವರು ಹಣ ಪಾವತಿಸದಿದ್ದರೆ ಮತ್ತೆ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ತಿಳಿಸಿದ್ದಾರೆ.