ಕರ್ನಾಟಕ

karnataka

ETV Bharat / state

ಭಾವೈಕ್ಯತೆ ಬೆಸೆದ ತಳವಗೇರಾ ಬೆಳದಿಂಗಳ ಬುತ್ತಿ ಜಾತ್ರೆ - ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ

ಅನ್ನದಾಸೋಹಿ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಬೆಳದಿಂಗಳ ಬುತ್ತಿ ಜಾತ್ರೆ ಅದ್ಧೂರಿಯಾಗಿ ನಡೆಯಿತು.

Butti jatre
ಬೆಳದಿಂಗಳ ಬುತ್ತಿ ಜಾತ್ರೆ

By

Published : Mar 9, 2023, 1:08 PM IST

ಕುಷ್ಟಗಿ: ತಾಲೂಕಿನ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಭಾವೈಕ್ಯತೆ ಬೆಸೆಯುವ 'ಬೆಳದಿಂಗಳ ಬುತ್ತಿ ಜಾತ್ರೆ'ಯಲ್ಲಿ ಹಲವು ಮನಸುಗಳ ಸಂಗಮವಾಯಿತು. ಬಡವ, ಶ್ರೀಮಂತ, ಮೇಲು ಜಾತಿ, ಕೆಳ ಜಾತಿ ಎಂಬ ಅಂತರವಿರದೇ ಎಲ್ಲರೂ ಒಂದೆಡೆ ಕುಳಿತು ಬುತ್ತಿ ಹಂಚಿ ತಿಂದರು.

ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮಾರನೇ ದಿನದ ಬೆಳಕಿನಲ್ಲಿ ನಡೆಯುವ ಈ ಜಾತ್ರೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರು, ತಮ್ಮ ಮನೆಯಲ್ಲಿ ತಯಾರಿಸಿದ ಬಿಳಿ ಜೋಳ, ಸಜ್ಜೆಯ ಖಡಕ್ ರೊಟ್ಟಿ, ತರಹೇವಾರಿ ಪಲ್ಲೆ, ಮೊಸರು, ಕಡಲೆ, ಗುರೆಳ್ಳು ತಂದು ಸವಿಯುತ್ತಾರೆ. ಇದನ್ನು ವನಕಾಂಡ, ಬೆಳದಿಂಗಳ ಬುತ್ತಿ ಜಾತ್ರೆ ಎಂದು ಸಹ ಕರೆಯಲಾಗುತ್ತದೆ.

ಈ ಬುತ್ತಿ ಜಾತ್ರೆ ಸಂದರ್ಭದಲ್ಲಿ ತೋಪಲಕಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ಕೊರಡಕೇರಾ, ಕವಲ ಬೋದೂರು, ವಣಗೇರಾ, ನಿಡಶೇಸಿ, ಚಳಗೇರಾದಿಂದ ಜನ ಬುತ್ತಿಯನ್ನು ಎತ್ತಿನ ಬಂಡಿಯಲ್ಲಿ ತಂದು ತಳವಗೇರಾ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಇಡುತ್ತಾರೆ. ನಂತರ ತಳವಗೇರಾ ಜನರ ಬುತ್ತಿಗಳು ಸೇರಿದಂತೆ ಆವರಣದಲ್ಲಿದ್ದ ಬುತ್ತಿಯನ್ನು ಆದರ್ಶ ಶಾಲೆಯ ಮೈದಾನದಲ್ಲಿ ಕುಳಿತು ಸವಿಯುತ್ತಾರೆ. ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆಧ್ಯಾತ್ಮಿಕ ಪ್ರವಚನ ನೀಡಿದರು.

ಬೆಳದಿಂಗಳ ಬುತ್ತಿ ಜಾತ್ರೆ

ಇದನ್ನೂ ಓದಿ:ಚಾಮರಾಜನಗರದಲ್ಲಿ ರೋಮಾಂಚಕ ಜಾತ್ರೆ: ಒಂದೂರಲ್ಲಿ ಕೆಂಡದ ನೈವೇದ್ಯ- ಮತ್ತೊಂದು ಊರಲ್ಲಿ ಮುಳ್ಳಿನ ಬೇಲಿಗೆ ಹಾರಿದ ಭಕ್ತರು

ಹಂಚಿಕೊಂಡು ಭೋಜನ ಸವಿಯುವುದು: ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಪರಸ್ಪರ ಹಂಚಿಕೊಂಡು ಭೋಜನ ಸವಿಯುತ್ತಾರೆ. ಈ ಜಾತ್ರೆಗೆ ಬಂದವರು ಯಾರೂ ಹಾಗೆಯೇ ಹೋಗುವುದಿಲ್ಲ. ಇಲ್ಲಿ ಊಟ ಮಾಡಿಯೇ ಹೋಗಬೇಕು. ದೇವಸ್ಥಾನ ಸಮಿತಿಯಿಂದ ಬಾನ ಮತ್ತು ಸಂಗಟಿ ಮಾಡಿಸಲಾಗುತ್ತದೆ. ಈ ಬಾನ, ಸಂಗಟಿ ಸಾಂಬಾರ್ ​ಕೊರತೆಯಾಗಬಾರದು. ಭೋಜನ ಉಳಿದರೆ ಸಮೃದ್ಧಿ ಹೆಚ್ಚಲಿದೆ ಎಂಬ ವಾಡಿಕೆ ಇದೆ.

ಈ ಬಾರಿಯ ಜಾತ್ರೆಯಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ನಾಮಾಂಜಲಿಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ತಾವರಗೇರಾದ ಯುವ ಕಲಾವಿದ ಆನಂದ ಪತ್ರಿಮಠ ಅವರು ಸಂತನೆಂದರೆ ಯಾರು.. ಎಂಬ ಹಾಡಿನ ಜೊತೆಗೆ ಶ್ರೀ ಸಿದ್ದೇಶ್ವರ ಶ್ರೀಗಳ ಚಿತ್ರ ಬಿಡಿಸಿ ಸೈ ಎನಿಸಿಕೊಂಡರು.

ಇದನ್ನೂ ಓದಿ:ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿಬಂಡಿ ರಥೋತ್ಸವ.. ಹರಿದುಬಂದ ಭಕ್ತಸಾಗರ

ಬುತ್ತಿ ಜಾತ್ರೆಯಲ್ಲಿ ರಾಜಕೀಯ ಗಣ್ಯರು ಭಾಗಿ:ಬುತ್ತಿ ಜಾತ್ರೆಯ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ದೇವೇಂದ್ರಪ್ಪ ಬಳೂಟಗಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿ.ಎಂ. ಹಿರೇಮಠ, ಬೆಂಗಳೂರಿನ ಉದ್ಯಮಿ ಸಂಗಯ್ಯ ಹಿರೇಮಠ. ಜಿ.ಪಂ ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಮುಖಂಡ ಪ್ರಭಾಕಾರ ಚಿಣಿ ಮತ್ತಿತರರಿದ್ದರು.

ABOUT THE AUTHOR

...view details