ಕುಷ್ಟಗಿ (ಕೊಪ್ಪಳ):ತುಳಸಿಯು ಪೂಜನೀಯ ಮತ್ತು ಬಹು ಔಷಧ ಗುಣಗಳನ್ನು ಹೊಂದಿರುವ ಸಸ್ಯ. ಹೆಚ್ಚಾಗಿ ಮನೆಯಲ್ಲಿ ಚಿಕ್ಕ ತುಳಸಿ ಗಿಡ ಇರುವುದನ್ನು ಗಮನಿಸಿದ್ದೇವೆ. ಆದರೆ ಇಲ್ಲೋರ್ವ ರೈತ ನಾಲ್ಕು ಎಕರೆ ಪ್ರದೇಶದಲ್ಲಿ ಈ ತುಳಸಿ ಗಿಡ ಬೆಳೆದು ಗಮನ ಸೆಳೆದಿದ್ದಾರೆ.
ಕುಷ್ಟಗಿಯ ಹಳೆ ಬಜಾರ್ ನಿವಾಸಿ ವ್ಯಾಪಾರಸ್ಥ ಹಾಗೂ ರೈತರು ಆಗಿರುವ ಕಾಶಪ್ಪ ಚಟ್ಟೇರ್, ಗಜೇಂದ್ರಗಡ ರಸ್ತೆಯಲ್ಲಿರುವ 4 ಎಕರೆ ಪ್ರದೇಶದಲ್ಲಿ ತುಳಸಿ ಬೆಳೆದು ಹಣ ಸಂಪಾದಿಸಬಹುದು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ನಾಲ್ಕು ಎಕರೆ ಪ್ರದೇಶದಲ್ಲಿ ತುಳಸಿ ಗಿಡ ಬೆಳೆದ ಕುಷ್ಟಗಿ ರೈತ ಬಹು ಔಷಧ ಗುಣಗಳ ಈ ಸಸ್ಯ ಮಳೆಯಾಶ್ರಿತ ಹಾಗೂ ನೀರಾವರಿ ಆಶ್ರಿತವಾಗಿ ಹಾಗೂ ಹವಮಾನಕ್ಕೆ ಹೊಂದಿಕೊಂಡು ಬೆಳೆಯಬಹುದಾಗಿದೆ. ಮಳೆಯಾಶ್ರಿತವಾಗಿ ಆದ್ರೆ ವರ್ಷಕ್ಕೆ ಒಮ್ಮೆ, ನೀರಾವರಿಯಾದರೆ ಒಮ್ಮೆ ನಾಟಿ ಮಾಡಿದರೆ ಮೂರು ವರ್ಷದವರೆಗೂ ಬೆಳೆಯಬಹುದಾಗಿದೆ. ಮೂಲತಃ ಔಷಧ ಸಸ್ಯವಾಗಿರುವುದರಿಂದ ಇದಕ್ಕೆ ಯಾವುದೇ ರೋಗ ರುಜಿನೆ, ಕೀಟ ಬಾಧೆ ಇಲ್ಲದೇ ಬೆಳೆಯಬಹುದಾಗಿದೆ. ಜೊತಗೆ ರೈತರ ಖರ್ಚು ಉಳಿಸುವ ಬೆಳೆ ಇದಾಗಿದೆ.
ರೈತ ಕಾಶಪ್ಪ ಚಟ್ಟೇರ್ ಏನಂತಾರೆ?
ತುಳಸಿ ಬೀಜದಿಂದ ನರ್ಸರಿಯಲ್ಲಿ ಸಸಿ ಮಾಡಿ ಮಾಡಿ ಒಂದೂವರೆ ತಿಂಗಳಿನಲ್ಲಿ ನಾಟಿ ಮಾಡಬಹುದು. ಮುಂದಿನ 40 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ಕಟಾವು ಮಾಡಿ ನೆರಳಿನಲ್ಲಿ ಒಣಗಿಸಬೇಕು. ಒಣಗಿದ ಬಳಿಕ ಎಲೆ ಹಾಗೂ ಕಡ್ಡಿಗಳನ್ನು ಬೇರ್ಪಡಿಸಬೇಕು. ಹಸಿರು ಬಣ್ಣದ ಒಣಗಿದ ಎಲೆಗಳಿಗೆ ಬೆಲೆ ಇದೆ. ಕಪ್ಪಾದರೆ ಬೆಲೆ ಇರುವುದಿಲ್ಲ. ಪ್ರತಿ ಕ್ವಿಂಟಲ್ಗೆ 10 ಸಾವಿರ ರೂ. ನಂತೆ ಕೃಷಿ ಒಪ್ಪಂದದ ಅನ್ವಯ ಆಯುರ್ವೇದಿಕ್ ಕಂಪನಿಗಳು ಖರೀದಿಸುತ್ತವೆ ಎನ್ನುತ್ತಾರೆ ರೈತ ಕಾಶಪ್ಪ ಚಟ್ಟೇರ್.
ಇದನ್ನೂ ಓದಿ:ನಿಫಾ ವೈರಸ್ ಶಂಕೆ.. ಸ್ವಇಚ್ಛೆಯಿಂದ ಬಂದು ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿ
ಈ ಬೆಳೆ ಯಾವುದೇ ರೀತಿಯ ಜಮೀನಿನಲ್ಲಿ ಬೆಳೆಯಬಹುದಾಗಿದೆ. ಪ್ರತಿ ಎರಡು ಅಡಿಗೆ ಒಂದರಂತೆ ನಾಟಿ ಮಾಡಿದ್ದು, ತಿಪ್ಪೆಗೊಬ್ಬರ ಹಾಗೂ ನೀರಾವರಿ ಕ್ಷೇತ್ರದಲ್ಲಿ ಸಕಾಲಿಕ ನೀರು ನಿರ್ವಹಣೆ, ಕಳೆ ಕಸ ತೆಗೆಸುವುದರಿಂದ ಉತ್ತಮ ಬೆಳೆ ನಿರೀಕ್ಷಿಸಬಹುದಾಗಿದೆ ಎಂದು ಕಾಶಪ್ಪ ಚಟ್ಟೇರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.