ಗಂಗಾವತಿ (ಕೊಪ್ಪಳ):ಅಂಜನಾದ್ರಿಯ ಬೆಟ್ಟದಲ್ಲಿ ಹನುಮ ಹುಟ್ಟಿದ್ದು ಎಂಬುದು ಮತ್ತೆ ಮತ್ತೆ ಘೋಷಣೆ ಮಾಡುವ ಅಗತ್ಯವಿಲ್ಲ. ಐತಿಹಾಸಿಕವಾಗಿ ಸಾವಿರಾರು ವರ್ಷಗಳ ಕಿಷ್ಕಿಂಧೆಯ ಪುರಾವೆಗಿಂತ ಇನ್ನೊಂದು ಪುರಾವೆ ಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ಹನುಮ ಅಲ್ಲಿ ಹುಟ್ಟಿದ್ದು, ಇಲ್ಲಿ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ಬಿಟ್ಟರೆ, ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮ ಸ್ಥಳ ಎಂಬುದರಲ್ಲಿ ಎರಡನೇ ಮಾತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಹನುಮನ ಜನ್ಮಸ್ಥಾನದ ವಿವಾದಗಳ ಬಗ್ಗೆ ತಾಲೂಕಿನ ಆನೆಗೊಂದಿಯಲ್ಲಿ ಮಾತನಾಡಿದ ಅವರು, ಹನುಮನ ಜನ್ಮ ಸ್ಥಾನ ಇದೇ ಅಂಜನಾದ್ರಿ ಎಂಬುವುದಕ್ಕಾಗಿಯೇ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಗೆ ಮುಂದಾಗಿದ್ದೇವೆ. ಇದನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಾದ ಅಗತ್ಯವಿಲ್ಲ. ನಮ್ಮ ನಂಬಿಕೆಯೇ ನಮ್ಮ ಘೋಷಣೆ. ಇಲ್ಲೇ ಹನುಮ ಹುಟ್ಟಿದ್ದು ಎಂದು ಸಾವಿರ ಬಾರಿ ಹೇಳುತ್ತೇನೆ ಎಂದು ಸಿಎಂ ಹೇಳಿದರು.
ಅಂಜನಾದ್ರಿಯನ್ನು ರಾಷ್ಟ್ರೀಯ ಮಟ್ಟದ ಯಾತ್ರಾ ಕ್ಷೇತ್ರವನ್ನಾಗಿಸುವ ಗುರಿ :ಅಂಜನಾದ್ರಿ ದೇಗುಲವನ್ನು ರಾಷ್ಟ್ರೀಯಮಟ್ಟದ ತೀರ್ಥ ಯಾತ್ರ ಸ್ಥಳವನ್ನಾಗಿ ಬದಲಿಸುವ ಉದ್ದೇಶದಿಂದ ಈಗಾಗಲೆ ಬಜೆಟ್ನಲ್ಲಿ ನೂರು ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ದೇಗುಲದ ಮೇಲೆ ಮತ್ತು ಬೆಟ್ಟದ ಕೆಳಗೆ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದೆ. ಬೆಟ್ಟದ ಮೇಲೆ ಹೋಗಲು ವೃದ್ಧರು, ಮಕ್ಕಳಿಗೆ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ. ಬೆಟ್ಟದ ಕೆಳಗೆ ಮಾರುಕಟ್ಟೆ, ಚಿಕಿತ್ಸೆ, ವಸತಿ, ಸ್ನಾನ ಘಟ್ಟದಂತ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಎಂ ಹೇಳಿದರು.