ಕುಷ್ಟಗಿ: ಕೊಪ್ಪಳ ಜಿಲ್ಲೆ ಗಡಿ ದಾಟುವುದರೊಳಗಾಗಿಯೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆದೇಶ ಪತ್ರ ಕೈ ಸೇರುವ ವಿಶ್ವಾಸವನ್ನು ಕೂಡಲ ಸಂಗಮ ಕ್ಷೇತ್ರದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ವ್ಯಕ್ತಪಡಿಸಿದರು.
ಓದಿ: ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಶೀಘ್ರ ನಿರ್ಧಾರ: ಸಿಎಂ ಭರವಸೆ
ಕೂಡಲಸಂಗಮ ದಿಂದ ಬೆಂಗಳೂರು ವಿಧಾನಸೌಧದವರೆಗೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆಯು, ಶುಕ್ರವಾರ ತಡರಾತ್ರಿ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮಕ್ಕೆ ಆಗಮಿಸಿ ವಾಸ್ತವ್ಯ ಮಾಡಿತು. ಶನಿವಾರ ಬೆಳಗ್ಗೆ ಆರಂಭವಾದ ಪಾದಯಾತ್ರೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸಿತು.
ಸಂಜೆ ಬಸವೇಶ್ವರ ವೃತ್ತದಲ್ಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಶ್ರೀಗಳು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು, ಬಾಗಲಕೋಟೆ ಜಿಲ್ಲೆಗೆ ನಿರಾಣಿ ಅವರ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಅವರ ಭೇಟಿಗೆ ಪಾದಯಾತ್ರೆ ಬಿಟ್ಟು ಹೋದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿರುವ ಹಿನ್ನೆಲೆ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಗಣಿ ಸಚಿವ ಸಿ.ಸಿ. ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶಾ ರೊಂದಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತಾಗಿ ಚರ್ಚಿಸಲಿದ್ದಾರೆ ಎಂದರು.
ಈಗಾಗಲೇ ಮಾತುಕತೆ ಆಗಿ ಐದನೇ ಸುತ್ತಿನ ಮಾತುಕತೆಯ ವೇಳೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಿಎಂ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದ್ದರೂ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸಿಎಂ ಅವರಿಗೆ ಶಿಕ್ಷಣ, ಉದ್ಯೋಗ ನಿಟ್ಟಿನಲ್ಲಿ ಮೀಸಲಾತಿ ಕಲ್ಪಿಸುವ ಪರಮಾಧಿಕಾರವಿದೆ. ಆ ಪರಮಾಧಿಕಾರನ್ನು ಸಿಎಂ ಯಡಿಯೂರಪ್ಪ ಅವರು ಸದ್ಬಳಕೆ ಮಾಡಿಕೊಂಡು ಈ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು ಎಂದರು.