ಕುಷ್ಟಗಿ (ಕೊಪ್ಪಳ): ಹುನಗುಂದ ತಾಲೂಕು ತುಂಬಾ ಹಿಂದುಳಿದಿದೆ. 2023ರಲ್ಲಿ ವಿಜಯಾನಂದ ಕಾಶಪ್ಪನವರ್ ಶಾಸಕರಾದ ಮೇಲೆ ತಾಲೂಕನ್ನು ಕಲ್ಯಾಣ ಕರ್ನಾಟಕ 371 (ಜೆ) ಕಲಂ ವ್ಯಾಪ್ತಿಗೆ ಸೇರಿಸಲು ಯತ್ನಿಸಲಿ ಎಂದು ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಜಗದ್ಗುರು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಒತ್ತಾಯಿಸಿದರು.
ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ 243ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆಯ ಹರಪಹಳ್ಳಿ ತಾಲೂಕನ್ನು ಹಿಂದಿನ ಶಾಸಕ ಎಂ. ಪಿ ರವೀಂದ್ರ ಅವರು ಹೋರಾಟದಿಂದ 371 (ಜೆ) ಕಲಂ ವ್ಯಾಪ್ತಿಗೆ ಸೇರಿಸಿದರು. ಅದೇ ರೀತಿಯಾಗಿ ವಿಜಯಾನಂದ ಕಾಶಪ್ಪನವರ್ ಪ್ರಯತ್ನಿಸಲಿ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಬಿಸಿ: 2021ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ಬೆಳಗಾವಿ ಅಧಿವೇಶನ ಶುರುವಾಗುವ ಹೊತ್ತಿಗೆ ಸರ್ಕಾರಕ್ಕೆ ಮತ್ತೊಮ್ಮೆ ಬಿಸಿ ಮುಟ್ಟಿಸಲು ಸನ್ನದ್ದರಾಗಬೇಕಿದೆ. ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಯಾರು ಹೇಗೆ ಬಿಸಿ ಮುಟ್ಟಿಸಿದ್ದಾರೆಂಬುದು ಅರಿವಾಗಿದೆ. ಪಂಚಮಸಾಲಿ ಸಮಾಜ ದೊಡ್ಡ ಸಮಾಜ. ಈ ಸಮಾಜವನ್ನು ಕಳೆದುಕೊಳ್ಳಬಾರದು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಮಗೆ ನ್ಯಾಯಕೊಡಿಸಲಿದ್ದಾರೆ ಎಂಬುದರ ಬಗ್ಗೆ ನಂಬಿಕೆ, ವಿಶ್ವಾಸವಿದೆ ಎಂದು ತಿಳಿಸಿದರು.