ಗಂಗಾವತಿ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಆಗಸ್ಟ್ 11ರಂದು ನಡೆದಿದ್ದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಇದುವರೆಗೂ ಸೌಹಾರ್ದ ವಾತಾವರಣ ನಿರ್ಮಾಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಗಣೇಶ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಿ, ಕೊಪ್ಪಳದ ಉಪ ವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ.
ಆಗಸ್ಟ್ 31ರಂದು ಗಣೇಶ ಹಬ್ಬವಿದ್ದು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಹಬ್ಬ ಆಚರಣೆಗೆ ಅವಕಾಶ ನೀಡಿದ್ದಲ್ಲಿ ಮತ್ತೆ ಗುಂಪು ಘರ್ಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಅವಕಾಶಗಳಿವೆ. ಗಣೇಶ ಉತ್ಸವ ರದ್ದು ಮಾಡುವಂತೆ ಉಪವಿಭಾಗ ಅಧಿಕಾರಿ ಬಸವಣೆಪ್ಪ ಕಳಶೆಟ್ಟಿ, ಕನಕಗಿರಿ ತಹಶೀಲ್ದಾರ್ ಮತ್ತು ಹುಲಿಹೈದರದ ಪಿಡಿಒಗೆ ಸೂಚನೆ ನೀಡಿದ್ದಾರೆ.